ಈರುಳ್ಳಿ ಉತ್ಪಾದನೆಯಲ್ಲಿ ಭಾರತ ವಿಶ್ವಕ್ಕೇ ನಂ.2

ಚೀನಾವನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮತ್ತು ರಫ್ತು ಮಾಡುವ ದೇಶ ಭಾರತ. ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಳುವರಿ ಕಡಿಮೆ. ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶ ಹೆಚ್ಚು, ಇಳುವರಿ ಕಡಿಮೆ. ಆದರೆ ಅಮೆರಿಕ, ದಕ್ಷಿಣ ಕೊರಿಯಾ, ಪಾಕಿಸ್ತಾನಗಳಲ್ಲಿ ಈರುಳ್ಳಿ ಬೆಳೆಯುವ ಪ್ರದೇಶ ಕಡಿಮೆ ಆದರೆ ಉತ್ಪಾದನೆ ಹೆಚ್ಚು.

ಬೆಲೆ ಏರಿಕೆಗೆ ಕಾರಣ ಏನು?

ಭಾರತದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶಗಳೆಂದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌. ಆದರೆ ಈ ಬಾರಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತಿವೃಷ್ಟಿ, ಪ್ರವಾಹ ಉಂಟಾಗಿ ಸಾಕಷ್ಟುಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನು ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌ನಲ್ಲಿಯೂ ಮಳೆಯಿಂದಾಗಿ ಹಾನಿಯಾಗಿದೆ. ಇನ್ನು ಕೆಲವೆಡೆ ಬರದಿಂದಾಗಿ ಬೆಳೆಯೇ ಬೆಳೆದಿಲ್ಲ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಎದುರಾಗಿದೆ.

ರಾಜಸ್ಥಾನ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾಗಳಲ್ಲೂ ಈರುಳ್ಳಿ ಬೆಳೆಯುತ್ತಾರೆ. ಆದರೆ ಬೆಲೆಯನ್ನು ನಿಯಂತ್ರಿಸುವ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾಗುವುದಿಲ್ಲವಾದ್ದರಿಂದ ಈರುಳ್ಳಿ ಬೆಲೆಯು ಬಳಕೆದಾರರಲ್ಲಿ ಕಣ್ಣೀರು ತರಿಸುತ್ತಿದೆ. ಹೀಗಾಗಿ ಕಳೆದ 5 ವರ್ಷಕ್ಕೆ ಹೋಲಿಸಿದರೆ ಈ ಬಾರಿ 40% ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೆ ಖಾಸಗಿ ವರ್ತಕರು ಟನ್‌ಗಟ್ಟಲೆ ಈರುಳ್ಳಿಯನ್ನು ದಾಸ್ತಾನಿರಿಸಿಕೊಂಡು ಬೆಲೆ ಏರಿಕೆ ಉಂಟಾಗುವಂತೆ ಮಾಡುತ್ತಿದ್ದಾರೆ.

ಸಂಗ್ರಹಣಾ ವ್ಯವಸ್ಥೆಯೇ ಇಲ್ಲ

ಈರುಳ್ಳಿಯಲ್ಲಿ ಎರಡು ಬೆಳೆಗಳಿವೆ: ಖಾರಿಫ್‌ (ಮುಂಗಾರು) ಹಾಗೂ ರಾಬಿ (ಹಿಂಗಾರು). ಖಾರಿಫ್‌ ಹಂಗಾಮಿನಲ್ಲಿ ಬಿತ್ತನೆಯಾದ ಈರುಳ್ಳಿ ಅಕ್ಟೋಬರ್‌ ಒಳಗೆ ಮಾರುಕಟ್ಟೆಗೆ ಬರುತ್ತದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚು ಬಳಸಲ್ಪಡುವುದು ಇದೇ ಈರುಳ್ಳಿ. ಡಿಸೆಂಬರ್‌ ಹೊತ್ತಿಗೆ ಬಿತ್ತನೆಯಾಗುವ ಈರುಳ್ಳಿ ಏಪ್ರಿಲ್‌- ಮೇ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸಾಮಾನ್ಯವಾಗಿ ಮೂರರಿಂದ 4 ತಿಂಗಳಲ್ಲಿ ಈರುಳ್ಳಿ ಬೆಲೆ ಕಟಾವಿಗೆ ಬರುತ್ತದೆ. ಅದರಲ್ಲಿ ಶೇ.30ರಷ್ಟನ್ನು ಮಹಾರಾಷ್ಟ್ರವೊಂದೇ ಬೆಳೆಯುತ್ತದೆ.

ಭಾರತ ಕೃಷಿ ಸಂಶೋಧನಾ ಮಂಡಳಿ ಪ್ರಕಾರ ರಾಬಿ ಋುತುವಿನಲ್ಲಿ ಉತ್ಪಾದನೆಯಾದ ಈರುಳ್ಳಿಯು ದೇಶದ ಕೊಯ್ಲು ಸಮಯದಿಂದ ಹಬ್ಬಹರಿದಿನಗಳು ಪ್ರಾರಂಭವಾಗುವರೆಗೆ ದೇಶದ ಬೇಡಿಕೆಯನ್ನು ಪೂರೈಸಬಹುದು. ಅದರೆ 30-40% ಬೆಳೆಯು ಶೇಖರಣೆ ವೇಳೆಯೇ ಹಾಳಾಗಿರುತ್ತದೆ. ಕೃಷಿ ಇಲಾಖೆ, ರೈತ ಕಲ್ಯಾಣ ಇಲಾಖೆ ಪ್ರಕಾರ ಭಾರತ ಒಟ್ಟು ಈರುಳ್ಳಿ ಉತ್ಪಾದನೆಯ ಪೈಕಿ ಕೇವಲ 2% ಉತ್ಪಾದನೆಯನ್ನು ಮಾತ್ರ ಶೀತಲ ಘಟಕಗಳಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಇದೆ. ಉಳಿದ 98% ಉತ್ಪಾದನೆಯನ್ನು ಹಾಗೆಯೇ ಶೇಖರಿಸಿಡಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷವೂ ಒಂದಲ್ಲಾ ಒಂದು ಕಡೆ ನೈಸರ್ಗಿಕ ವಿಕೋಪಗಳು ಉಂಟಾಗುವ ಕಾರಣ ದಾಸ್ತಾನು ವ್ಯವಸ್ಥೆ ಇಲ್ಲದೆ ಈರುಳ್ಳಿ ಕೆಡುತ್ತದೆ.

ಬೆಲೆ ಏರಿಕೆ ಲಾಭ ರೈತರಿಗಿಲ್ಲ!

ಬೆಲೆ ಏರಿಕೆಯಿಂದ ರೈತರಿಗೆ ಲಾಭ ಎಂದು ಭಾವಿಸಲಾಗುತ್ತದೆ. ಆದರೆ ವಾಸ್ತವವೇ ಬೇರೆ. ಭಾರತದಲ್ಲಿ ಸಗಟು ದರಕ್ಕಿಂತ ದುಪ್ಪಟ್ಟು ಬೆಲೆಗೆ ಚಿಲ್ಲರೆ ಬೆಲೆಯಲ್ಲಿ ಈರುಳ್ಳಿ ಮಾರಾಟವಾಗುತ್ತದೆ. ಭಾರತದ ಸರಾಸರಿ ಕುಟುಂಬಗಳು ದುಪ್ಪಟ್ಟು ಹಣ ನೀಡಿ ಚಿಲ್ಲರೆ ವ್ಯಾಪಾರಿಗಳಿಂದ ಈರುಳ್ಳಿ ಕೊಂಡುಕೊಳ್ಳುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ಸಗಟು ರೂಪದಲ್ಲಿ 221 ಟನ್‌ ಈರುಳ್ಳಿ ಕೊಂಡರೆ ಕೆ.ಜಿ ಈರುಳ್ಳಿ ಬೆಲೆ 25 ರು. ಆಗುತ್ತದೆ. ಆದರೆ ಅದನ್ನು ಚಿಲ್ಲರೆ ವ್ಯಾಪಾರಿಗಳು 60 ರು.ಗೆ ಮಾರಾಟ ಮಾಡುತ್ತಾರೆ. ಅಲ್ಲದೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಂಡಿರುವ ಖಾಸಗಿ ಮಾರುಕಟ್ಟೆವರ್ತಕರು ಈರುಳ್ಳಿಯನ್ನು ದಾಸ್ತಾನಿರಿಕೊಂಡು ಬೆಲೆ ಏರಿಕೆಯಾದಾಗ ಅದನ್ನು ಮಾರುಕಟ್ಟೆಗೆ ಬಿಡುತ್ತಾರೆ. ಹೀಗಾಗಿ ಈ ಬೆಲೆ ಏರಿಕೆಯಿಂದ ರೈತರಿಗೆ ಲಾಭ ಎಂದೂ ಹೇಳಲಾಗದು.

ಏಷ್ಯಾ, ಮಧ್ಯಪ್ರಾಚ್ಯದಲ್ಲೂ ಬೆಲೆ ಏರಿಕೆ

ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಭಾರತದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತವೆ. ಆದರೆ ಈ ಬಾರಿ ಭಾರತದಲ್ಲೇ ಉತ್ಪಾದನೆ ಕುಂಠಿತಗೊಂಡಿರುವ ಕಾರಣ ಏಷ್ಯಾದೆಲ್ಲೆಡೆ ಈರುಳ್ಳಿ ಬೆಲೆ ಏರಿಕೆಯಾಗಿದೆ.

ಸರ್ಕಾರ ಏನೇನು ಕ್ರಮ ಕೈಗೊಂಡಿದೆ?

ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಈರುಳ್ಳಿ ರಫ್ತನ್ನು ನಿಷೇಧ ಮಾಡಿದೆ. ಹಾಗೆಯೇ ಚಿಲ್ಲರೆ ವ್ಯಾಪಾರಿಗಳು 100 ಕ್ವಿಂಟಲ್‌, ಸಗಟು ವ್ಯಾಪಾರಿಗಳು 500 ಕ್ವಿಂಟಲ್‌ ಈರುಳ್ಳಿಯನ್ನು ಮಾತ್ರ ದಾಸ್ತಾನಿಡಬೇಕೆಂದು ಸೂಚಿಸಿದೆ. ಈ ಮುಂಚೆ 2010, 2014 ಮತ್ತು 2017ರಲ್ಲಿಯೂ ಇದೇ ರೀತಿ ಮಾಡಲಾಗಿತ್ತು.

ಸರ್ಕಾರವನ್ನೇ ಬೀಳಿಸಿದ್ದ ಈರುಳ್ಳಿ

ಈರುಳ್ಳಿ ಬೆಲೆ ಏರಿಕೆ ಒಂದು ಸಾಮಾನ್ಯ ಬಿಕ್ಕಟ್ಟು ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಈರುಳ್ಳಿ ಬೆಲೆ ಏರಿಕೆಯ ಬಿಸಿಯಿಂದ ಸರ್ಕಾರವೇ ಬಿದ್ದು ಹೋದ ಉದಾಹರಣೆ ಇದೆ. ರಾಜಕಾರಣಿಗಳಿಗೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದೂ ಇದೆ. 1980ರ ಸಾರ್ವತ್ರಿಕ ಚುನಾವಣೆ ವೇಳೆ ಈರುಳ್ಳಿ ಬೆಲೆ ಏರಿಕೆ ಚುನಾವಣಾ ವಿಷಯವಾಗಿತ್ತು. ಇಂದಿರಾ ಗಾಂಧಿ ಈರುಳ್ಳಿ ಬೆಲೆ ಏರಿಕೆಯ ಲಾಭ ಪಡೆದು ಮತ್ತೆ ಅಧಿಕಾರಕ್ಕೆ ಬಂದರು. 1998ರಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಉರುಳಲೂ ಮುಖ್ಯ ಕಾರಣವಾಗಿದ್ದೇ ಈರುಳ್ಳಿ ಬೆಲೆ ಏರಿಕೆ.

ಈ ಹಿಂದಿನ ಬಿಕ್ಕಟ್ಟಿಗೆ ಪಾಕ್‌ ಆಸರೆಯಾಗಿತ್ತು, ಈಗ?

2010ರ ನವೆಂಬರ್‌ನಲ್ಲಿ ನಾಸಿಕ್‌ನಲ್ಲಿ ಅತಿವೃಷ್ಟಿಉಂಟಾದ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿ ಬೆಲೆ ಗಗನಕ್ಕೇರಿತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಈರುಳ್ಳಿ ರಫ್ತನ್ನು ನಿಷೇಧ ಮಾಡಿ, ಕಡಿಮೆ ಆಮದು ಸುಂಕ ಹೇರಿ ಪಾಕಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡು ಸಮಸ್ಯೆ ಪರಿಹರಿಸಿದ್ದರು. 2013, 2015ರಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿತ್ತು. 2015ರಲ್ಲಿ ದೆಹಲಿಯಲ್ಲಿ 1 ಕೆ.ಜಿ ಈರುಳ್ಳಿ ಬೆಲೆ 80ರು.ಗೆ ಏರಿಕೆಯಾಗಿತ್ತು. ಆಗ ಪಾಕಿಸ್ತಾನ ಮತ್ತು ಆಷ್ಘಾನಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಸದ್ಯ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸರಿಯಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನದಿಂದ ಭಾರತ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಕಂಡುಬರುತ್ತಿಲ್ಲ.

ಪರಿಹಾರ ಏನು?

ದಾಸ್ತಾನಿಗೆ ಕ್ರಮ ಅಗತ್ಯ: ರಾಬಿ ಬೆಳೆಯಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆಯಾಗುತ್ತದೆ. ಆದರೆ ಶೇಖರಣಾ ವ್ಯವಸ್ಥೆ ಇಲ್ಲದ ಕಾರಣ ಬಹುತೇಕ ಬೆಳೆ ಹಾಳಾಗುತ್ತಿದೆ. ಅತ್ಯಾಧುನಿಕ ಶೀತಲ ಘಟಕಗಳನ್ನು ನಿರ್ಮಾಣ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ದೊರಕಬಹುದು ಎಂಬುದು ತಜ್ಞರ ಅಭಿಮತ.

ಈರುಳ್ಳಿ ಬೆಳೆ ವಿಸ್ತರಣೆ: ಪ್ರಸ್ತುತ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ದೇಶದ ಒಟ್ಟು ಉತ್ಪಾದನೆಯ 60% ಈರುಳ್ಳಿ ಬೆಲೆಯಲಾಗುತ್ತಿದೆ. ದೇಶದ ಇತರ ಪ್ರದೇಶಗಳಲ್ಲೂ ಈರುಳ್ಳಿ ಬೆಳೆಯುವಂತೆ ಪ್ರೋತ್ಸಾಹಿಸಬಹುದು.