ಬೆಂಗಳೂರು[ಜು.12]: ಕೆಲ ವಿಧಾನಸಭೆಗಳಲ್ಲಿ ರಾಜೀನಾಮೆ ಅರ್ಜಿಗಳನ್ನು ವಿಲೇವಾರಿ ಮಾಡದೆ ವರ್ಷಾನುಗಟ್ಟಲೇ ಇಟ್ಟುಕೊಂಡಿರುತ್ತಾರೆ ಎಂಬ ವಿಧಾನಸಭೆ ಅಧ್ಯಕ್ಷರ ಹೇಳಿಕೆ ನೋವು ತರಿಸಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ವಿಧಾನಮಂಡಲದ ಅಧಿವೇಶನವನ್ನು ಬಿಜೆಪಿ ಬಹಿಷ್ಕರಿಸುವುದಿಲ್ಲ. ಬಹುಮತ ಇಲ್ಲದ ಸರ್ಕಾರಕ್ಕೆ ಚಳಿ ಜ್ವರ ಬಿಡಿಸುವ ಕೆಲಸವನ್ನು ಮಾಡುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ವಿಧಾನಸಭೆಯಲ್ಲಿ ಶಾಸಕರ ರಾಜೀನಾಮೆ ಅರ್ಜಿ ಕಾಯ್ದಿರಿಸಿದ್ದಾರೆ ಎಂದು ಅದೇ ಮಾದರಿ ಅನುಸರಿಸುವುದು ಒಳ್ಳೆ ಬೆಳವಣಿಗೆಯಲ್ಲ ಎಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರದಿಂದ ನೋವು ಅನುಭವಿಸಿದ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಬಗ್ಗೆ ಸ್ಪೀಕರ್‌ ಪ್ರಶ್ನೆ ಮಾಡಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸ್ಪೀಕರ್‌ ಕಚೇರಿಯಲ್ಲಿ ತಡವಾಗಬಹುದು ಎಂಬ ಕಾರಣಕ್ಕೆ ಶಾಸಕರು ಸುಪ್ರೀಂ ಮೊರೆ ಹೋಗಿದ್ದಾರೆ. ಪ್ರತಿಯೊಬ್ಬನಿಗೂ ಸಂವಿಧಾನದಲ್ಲಿ ಆಯ್ಕೆ ಮಾಡಲು ಅವಕಾಶ ಇದೆ. ಅದರಂತೆ ಶಾಸಕರು ನ್ಯಾಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸಂವಿಧಾನದಡಿಯಲ್ಲಿ ಶೀಘ್ರ ತೀರ್ಮಾನ ಒಪ್ಪಿಕೊಳ್ಳುವಂತಹ ಕೆಲಸ ಮಾಡುತ್ತಾರೆ ಎಂದು ಜನ ಕಾಯುತ್ತಿದ್ದಾರೆ. ಜನರ ನಿರೀಕ್ಷೆ ಹುಸಿಯಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಶಾಸಕಾಂಗ ಸಭೆಯಲ್ಲಿ ಶುಕ್ರವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಯಾವ ರೀತಿಯ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನವನ್ನು ಬಹಿಷ್ಕರಿಸುವುದಿಲ್ಲ. ಬಹುಮತ ಇಲ್ಲದ ಸರ್ಕಾರಕ್ಕೆ ಚಳಿ ಜ್ವರ ಬಿಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅಶೋಕ್‌ ವಾಗ್ದಾಳಿ ನಡೆಸಿದರು.