ಕೊನೆಗೂ ಮೆಟ್ರೋದಲ್ಲಿ ಹಿಂದಿ ಬಳಕೆ ಬೇಡ ಅನ್ನೋ ಕೂಗಿಗೆ ಜಯ ಸಿಕ್ಕಿದೆ. ಮೇಟ್ರೋದಲ್ಲಿ ಹಿಂದಿ ಬಳಕೆಯನ್ನು ತೆಗೆದು ಹಾಕಿ ಅಂತಾ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಬೆಂಗಳೂರು (ಜು.28): ಕೊನೆಗೂ ಮೆಟ್ರೋದಲ್ಲಿ ಹಿಂದಿ ಬಳಕೆ ಬೇಡ ಅನ್ನೋ ಕೂಗಿಗೆ ಜಯ ಸಿಕ್ಕಿದೆ. ಮೇಟ್ರೋದಲ್ಲಿ ಹಿಂದಿ ಬಳಕೆಯನ್ನು ತೆಗೆದು ಹಾಕಿ ಅಂತಾ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಮೇಟ್ರೋದಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಬಳಸಲಾಗುತ್ತಿತ್ತು. ಹಿಂದಿ ಬಳಕೆಗೆ ನಾಡಿನ ಜನತೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಾಹಿತಿಗಳು, ಚಿಂತಕರು ಮತ್ತು ಕನ್ನಡ ಪರ ಹೋರಾಟಗಾರರು ಹೋರಾಟವನ್ನು ನಡೆಸಿದ್ದರು. ಜೊತೆಗೆ, ಹೋರಾಟಗಾರರು ಮೇಟ್ರೋಗೆ ನುಗ್ಗಿ ಹಿಂದಿ ಬಳಕೆಯ ಬೋರ್ಡ್ ಗಳನ್ನು ನಾಶ ಪಡಿಸುವ ಪ್ರಯತ್ನವನ್ನೂ ನಡೆಸಿದ್ದರು. ಆದರೂ ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ. ಅಲ್ಲದೇ, ಮೇಟ್ರೋ ನಿಲ್ದಾಣ ಮತ್ತು ಮೇಟ್ರೋಕ್ಕೆ ಸಾಕಷ್ಟು ಭದ್ರತೆಯನ್ನು ನೀಡಲಾಗಿತ್ತು.
ಬೆಂಗಳೂರಲ್ಲಿ ಪ್ರತಿನಿತ್ಯ ಮೂರು ಲಕ್ಷ ಮಂದಿ ಮೇಟ್ರೋದಲ್ಲಿ ಸಂಚಾರ ಮಾಡುತ್ತಾರೆ. ಇವರಿಗೆಲ್ಲ ಕನ್ನಡ ಮತ್ತು ಇಂಗ್ಲೀಷ್ ಮಾತ್ರ ಅರ್ಥವಾಗುತ್ತೆ. ಬಹುತೇಕರಿಗೆ ಹಿಂದಿ ಬರಲ್ಲ. ಮತ್ತು ಮೇಟ್ರೋ ಯೋಜನೆಗೆ ಕೇಂದ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನ ರಾಜ್ಯವೇ ನೀಡುತ್ತಿದೆ. ಹೀಗಾಗಿ ರಾಜ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ದೊರಕಬೇಕು. ಜೊತೆಗೆ ನಾಡು ನುಡಿ ರಕ್ಷಣೆ ಹೊಣೆಯೂ ರಾಜ್ಯ ಸರ್ಕಾರದ್ದಾಗಿದೆ. ಹೀಗಾಗಿ ಮೇಟ್ರೋದಲ್ಲಿ ಹಿಂದಿ ಬಳಕೆ ಬೇಡ ಅಂತಾ ಸಿದ್ದರಾಮಯ್ಯ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಹೋರಾಟಗಾರರು ಮತ್ತು ಬರಹಗಾರರು ರಾಜ್ಯ ಸರ್ಕಾರಕ್ಕೆ ಹಿಂದಿ ಬಳಕೆ ಬೇಡ, ಹಿಂದಿಯನ್ನು ಮೇಟ್ರೋದಲ್ಲಿ ನಿಷೇಧಿಸಿ ಅಂತಾ ಪತ್ರ ಕೂಡಾ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
