ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನೂ ಆಂತರಿಕ ಸಮೀಕ್ಷೆ ಮಾಡಿಸಿದ್ದೇನೆ. ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರಲ್ಲ, ಸ್ಪಷ್ಟ ಬಹು ಮತದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವರದಿ ಬಂದಿದೆ' ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು(ಡಿ.9): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನೂ ಆಂತರಿಕ ಸಮೀಕ್ಷೆ ಮಾಡಿಸಿದ್ದೇನೆ. ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರಲ್ಲ, ಸ್ಪಷ್ಟ ಬಹು ಮತದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವರದಿ ಬಂದಿದೆ' ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಮೊದಲ ಹಂತದ ಆಂತರಿಕ ಸಮೀಕ್ಷೆಯಾಗಿದ್ದು, 2ನೇ ಹಂತದ ಸಮೀಕ್ಷೆ ಮಾಡಿಸುತ್ತಿದ್ದೇನೆ. ರಾಜ್ಯದ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿನನಗೋಸ್ಕರ ಸಮೀಕ್ಷೆ ಮಾಡಿಸಿದ್ದೇನೆ. ಸಮೀಕ್ಷೆ ವಿವರವನ್ನು ಜನರ ಮುಂದೆ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಹೇಳಿದರೆ ವಿರೋಧ ಪಕ್ಷದವರು ಅದನ್ನು ವಿವಾದ ಮಾಡುತ್ತಾರೆ ಎಂದರು.
ಈಗಾಗಲೇ ನಡೆಸಿರುವ ಚುನಾವಣಾ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಆದರೆ, ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರುವುದಿಲ್ಲ. ಬಹುಮತದ ಸರ್ಕಾರ ಬರುತ್ತದೆ. ಕರ್ನಾಟಕದಲ್ಲಿ ಜಾತ್ಯತೀತ ಪಕ್ಷವಾಗಿ ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿದೆ. ಬೇರೆಯವರ ಸಹಾಯ ಪಡೆದು ಬಿಜೆಪಿ ಮಟ್ಟ ಹಾಕುವ ಅಗತ್ಯವಿಲ್ಲ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆಬರುವುದಾಗಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಕಿಡಿ: ಇದೇ ವೇಳೆ ಬಿಜೆಪಿ ಮುಖಂಡರ ವಿರುದ್ಧ ತೀವ್ರ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿಯವರ ನಾಲಿಗೆ ಅವರ ಸಂಸ್ಕೃತಿ ಹೇಳುತ್ತದೆ. ಬಿಜೆಪಿಯವರು ತಮಗೆ ಸಂಸ್ಕೃತಿ, ಸಂಸ್ಕಾರ ಇದೆ ಎನ್ನುತ್ತಾರೆ. ನಾನು, ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಂಸದ ಆರ್. ಧ್ರುವನಾರಾಯಣ್ ಸೇರಿ ಅನೇಕರು ಹಳ್ಳಿಯ ಹಿನ್ನೆಲೆಯಿಂದಲೇ ಬಂದಿದ್ದೇವೆ. ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತದೆ. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ. ಮುಖಂಡ ಮಣಿಶಂಕರ್ ಅಯ್ಯರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು `ನೀಚ' ಎಂದು ಹೇಳಿದ್ದಕ್ಕೆ ಪಕ್ಷದಿಂದ ಅಮಾನತು ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
