ಬೆಂಗಳೂರು : ವಿಶ್ವದಲ್ಲೇ ಅತಿ ವೇಗವಾಗಿ ನೀರು ಬರಿದಾಗುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಉದ್ಯಾನ ನಗರಿಯ ಶೇ.45ರಷ್ಟುನಾಗರಿಕರಿಗೆ 2031ರ ವೇಳೆಗೆ ಶುದ್ಧ ಕುಡಿಯುವ ನೀರು ದೊರೆಯುವುದಿಲ್ಲ!

ಹೌದು, ಜಲಮಂಡಳಿಯ ಅಧಿಕೃತ ಅಂದಾಜಿನ ಪ್ರಕಾರವೇ ಕಾವೇರಿ ಹಾಗೂ ಅಂತರ್ಜಲ ನೀರು ಬಳಸಿಕೊಂಡರೂ 2031ರ ವೇಳೆಗೆ ನಗರಕ್ಕೆ 16 ಟಿಎಂಸಿ ನೀರಿನ ಕೊರತೆ ಉಂಟಾಗಲಿದೆ.

2031ರ ವೇಳೆಗೆ 2.03 ಕೋಟಿ ಜನಸಂಖ್ಯೆ ಮುಟ್ಟಲಿರುವ ಬೆಂಗಳೂರಿಗೆ ಕನಿಷ್ಠ 53.90 ಟಿಎಂಸಿ ಶುದ್ಧ ನೀರು ಬೇಕು. ಜಲಮಂಡಳಿ ಬೆರಳು ತೋರುತ್ತಿರುವ ನಿರೀಕ್ಷಿತ ಕಾವೇರಿ 5ನೇ ಹಂತ, ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೂ 31.5 ಟಿಎಂಸಿ ನೀರು ಮಾತ್ರ ಪೂರೈಕೆಯಾಗಲಿದೆ. 5.5 ಟಿಎಂಸಿ ಅಂತರ್ಜಲ ಸೇರಿ 37 ಟಿಎಂಸಿ ನೀರು ಲಭ್ಯವಾಗಬಹುದು ಎಂಬುದು ಜಲಮಂಡಳಿ ಅಂದಾಜು.

ಆದರೆ, ಅಂತರ್ಜಲ ಮಟ್ಟದ ಭಾರಿ ಕುಸಿತದಿಂದ ಶೇ.52ರಷ್ಟುಅಂತರ್ಜಲ ಈಗಾಗಲೇ ಕಲುಷಿತಗೊಂಡಿದೆ. ನೀರು ಮರುಪೂರಣ ವೈಫಲ್ಯದಿಂದ ಮುಂದಿನ 10 ವರ್ಷದಲ್ಲಿ ಶೇ.90ರಷ್ಟುಬೋರ್‌ವೆಲ್‌ ಒಣಗಲಿವೆ. ಹೀಗಾಗಿ ಬೆಂಗಳೂರು ಕಾವೇರಿ ಮೂಲ ಒಂದನ್ನೇ ನೆಚ್ಚಿಕೊಳ್ಳಬೇಕಿದ್ದು, 2031ರ ವೇಳೆಗೆ 20ಕ್ಕೂ ಹೆಚ್ಚು ಟಿಎಂಸಿ ನೀರಿನ ಕೊರತೆ ಉಂಟಾಗಲಿದೆ. ಪರಿಣಾಮ ಶೇ.45ರಷ್ಟುಜನರಿಗೆ ನೀರೇ ಇಲ್ಲದಂತಾಗಬಹುದು. ಇಲ್ಲದಿದ್ದರೆ ಪ್ರಸ್ತುತ ನಿತ್ಯ ತಲಾ 100 ಲೀಟರ್‌ ನೀರು ಪಡೆಯುತ್ತಿರುವ ನಾಗರಿಕರಿಗೆ ನೀರಿನ ಪೂರೈಕೆ 60 ಲೀಟರ್‌ಗೆ ಕುಸಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇದಲ್ಲದೆ, ಈಗಾಗಲೇ ಕಾವೇರಿ ನದಿಯ ಬೆಂಗಳೂರು ಪಾಲು ಮುಗಿದಿದೆ. ಇನ್ನು ಹೊಸ ಯೋಜನೆ ಕೈಗೆತ್ತಿಕೊಂಡರೂ ಕೃಷಿ ಬಳಕೆಯ ನೀರನ್ನು ಕಡಿತಗೊಳಿಸಿ ಬೆಂಗಳೂರಿಗೆ ವರ್ಗಾಯಿಸಬೇಕು. ಅದಕ್ಕೆ ಸರ್ಕಾರ ಮುಂದಾದರೂ ಯೋಜನೆ ಕಾರ್ಯಗತಗೊಳ್ಳಲು ಸರ್ಕಾರದ ವೇಗದ ಪ್ರಕಾರ 10 ವರ್ಷ ಸಾಲದು. ಇಂತಹ ದುಸ್ತರ ದಿನಗಳಿಗೆ ಕಾತುರವಾಗಿರುವ ಬೆಂಗಳೂರಿಗೆ ಕಾವೇರಿ ನದಿ ಕೊಳ್ಳದಲ್ಲಿ ಕಳೆದ 20 ವರ್ಷದಲ್ಲಿ ಶೇ.19.5ರಷ್ಟುಮಳೆ ಕುಸಿತ ದಾಖಲಾಗಿರುವುದು ಮತ್ತಷ್ಟುನಿದ್ದೆಗೆಡಿಸಿದೆ.

ಮಳೆ ಪ್ರಮಾಣ ಇದೇ ರೀತಿ ಕುಸಿತದ ಹಾದಿ ತುಳಿದರೆ ಖಂಡಿತ 2030ರ ವೇಳೆಗೆ ಬೆಂಗಳೂರು ಭೀಕರ ಜಲಕ್ಷಾಮಕ್ಕೆ ತುತ್ತಾಗಲಿದೆ. ಕೇಪ್‌ಟೌನ್‌ ಮಾದರಿಯಲ್ಲೇ ಬಿಗಿ ಪೊಲೀಸ್‌ ಭದ್ರತೆ ನಡುವೆ ಪಡಿತರ ವ್ಯವಸ್ಥೆಯಲ್ಲಿ ನೀರು ಪಡೆಯಬಹುದಾದ ದುಸ್ಥಿತಿ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂದಿನ ವಾಸ್ತವ ಸ್ಥಿತಿಗತಿ

ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ 1,2,3 ಹಾಗೂ ಕಾವೇರಿ 1ನೇ ಹಂತ, ಕಾವೇರಿ 2ನೇ ಹಂತದ ಯೋಜನೆಗಳ ಮೂಲಕ 1,470 ದಶಲಕ್ಷ ಲೀಟರ್‌ನ್ನು ಪೂರೈಸುತ್ತಿದೆ. ಇದರಲ್ಲಿ 300 ದಶಲಕ್ಷ ಲೀಟರ್‌ ಕಾರ್ಖಾನೆಗಳು, ವಾಣಿಜ್ಯ ಉದ್ದಿಮೆಗಳಿಗೆ ನೀಡಲಾಗುತ್ತಿದೆ. ಉಳಿದಂತೆ 1,170 ದಶಲಕ್ಷ ಲೀಟರ್‌ ಮಾತ್ರ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾನದಂಡದ ಪ್ರಕಾರ ಪ್ರತಿಯೊಬ್ಬರಿಗೂ ನಿತ್ಯ 135 ಶುದ್ಧ ನೀರೊದಗಿಸಬೇಕೆಂಬ ನಿಯಮವಿದ್ದರೂ ಜಲಮಂಡಳಿ ಈ ಲೆಕ್ಕದಲ್ಲಿ 100 ಲೀಟರ್‌ ನೀರು ಮಾತ್ರ ಪೂರೈಸುತ್ತಿದೆ. ಇನ್ನು ಶೇ.37ರಷ್ಟಿರುವ ಸೋರಿಕೆ ಪರಿಗಣಿಸಿದರೆ ಇದರ ಪ್ರಮಾಣ ಮತ್ತೂ ಶೋಚನೀಯ.

ಇನ್ನು 2031ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.03 ಕೋಟಿಯಷ್ಟಾಗಲಿದೆ. ಹೀಗಾಗಿ ಪ್ರಸ್ತುತ ನಿತ್ಯ 1,470 ದಶಲಕ್ಷ ಲೀಟರ್‌ ನೀರೊದಗಿಸುತ್ತಿರುವ ಜಲಮಂಡಳಿ 2031ರ ವೇಳೆಗೆ ನಿತ್ಯ 3,000 ದಶಲಕ್ಷ ಲೀಟರ್‌ ನೀರೊದಗಿಸಬೇಕು. ಅಂದರೆ ಹತ್ತು ವರ್ಷದಲ್ಲಿ ಅಕ್ಷರಶಃ ದುಪ್ಪಟ್ಟು ಪ್ರಮಾಣದ ನೀರು ಪೂರೈಸಬೇಕು.

.2030ಕ್ಕೆ ಪರ್ಯಾಯ ಮೂಲ

ಇನ್ನು ಹೆಚ್ಚಾಗಲಿರುವ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಸುವ ಒತ್ತಡದಲ್ಲಿರುವ ಬೆಂಗಳೂರು ಜಲಮಂಡಳಿ ಮುಂದೆ ನಾಲ್ಕು ಯೋಜನೆಗಳ ಆಯ್ಕೆ ಇದೆ. ಇದರಲ್ಲಿ 2030ರ ವೇಳೆಗೆ ಅನುಷ್ಠಾನ ವಿಶ್ವಾಸವಿರುವ ಯೋಜನೆಗಳು ಕಾವೇರಿ 5ನೇ ಹಂತ (10 ಟಿಎಂಸಿ) ಹಾಗೂ ಎತ್ತಿನ ಹೊಳೆ (2.5 ಟಿಎಂಸಿ) ಯೋಜನೆಗಳು ಮಾತ್ರ. ಇನ್ನು ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟಿಬೆಂಗಳೂರಿಗೆ 2.5 ಟಿಎಂಸಿ ನೀರೊದಗಿಸುವ ಯೋಜನೆ ಇನ್ನೂ ಒಪ್ಪಿಗೆ ಪಡೆಯುವ ಹಂತದಲ್ಲೇ ಇದೆ.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪಂಪ್‌ ಮಾಡುವ ಯೋಜನೆಯಿಂದ 30 ಟಿಎಂಸಿ ನೀರು ಪಡೆಯಬಹುದು ಎಂದು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ ಜಲಮಂಡಳಿಯೇ 2050ರ ದೂರದೃಷ್ಟಿಯ ಯೋಜನೆ ಎಂದು ಸ್ಪಷ್ಟಪಡಿಸಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಳಿ ಸಮುದ್ರಕ್ಕೆ ಹರಿಯುವ ನೀರನ್ನು ಸಂಗ್ರಹಿಸಿ ನೀರು ಪಡೆಯಬಹುದು ಎಂಬ ಸಲಹೆ ಇದ್ದರೂ ಸರ್ಕಾರ ಇನ್ನೂ ಪರಿಗಣಿಸಿಲ್ಲ. ಹೀಗಾಗಿ 2030ರ ವೇಳೆಗೆ ಗಮನಾರ್ಹ ಹೊಸ ಮೂಲಗಳು ಸೇರ್ಪಡೆಗೊಳ್ಳುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ತ್ತಿನಹೊಳೆ ಯೋಜನೆ

.14000 ಕೋಟಿ ಅಂದಾಜು ವೆಚ್ಚದಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸಲು ಕೈಗೆತ್ತಿಕೊಂಡಿರುವ ಯೋಜನೆ ಇದು. ಯೋಜನೆ 2023ಕ್ಕೆ ಪೂರ್ಣಗೊಳ್ಳುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ. ಯೋಜನೆ ಪ್ರಕಾರ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ 0.8 ಟಿಎಂಸಿ ನೀರನ್ನು ಅರ್ಕಾವತಿ ಜಲಾಶಯಕ್ಕೆ ಹರಿಸಲಾಗುತ್ತದೆ. ಬಳಿಕ ನೀರನ್ನು ಶುದ್ಧೀಕರಿಸಿ ಬೆಂಗಳೂರು ನಗರಕ್ಕೆ ಪೂರೈಸುವುದು ಉದ್ದೇಶ. ಆದರೆ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ಹಾಗೂ ತಿಪ್ಪಗೊಂಡನಹಳ್ಳಿ, ಅರ್ಕಾವತಿ ಜಲಾಶಯದಲ್ಲಿ ಸ್ಥಗಿತಗೊಂಡಿರುವ ಶುದ್ಧೀಕರಣ ಹಾಗೂ ಪಂಪಿಂಗ್‌ ಠಾಣೆಗಳ ಕೆಲಸ ಬಾಕಿ ಇರುವುದರಿಂದ ಈ ಯೋಜನೆ ಯಾವಾಗ ಕಾರ್ಯಗತಗೊಳ್ಳುತ್ತದೆ ಎಂಬುದು ಸ್ಪಷ್ಟವಿಲ್ಲ.

ಮೇಕೆದಾಟು ಯೋಜನೆ

.5912 ಕೋಟಿ ಅಂದಾಜು ವೆಚ್ಚದ ಯೋಜನೆಯಿದು. ತಮಿಳುನಾಡು ಸರ್ಕಾರದ ವಿರೋಧದ ನಡುವೆಯೇ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ವಿದ್ಯುತ್‌ ಉತ್ಪಾದನೆ ಮುಖ್ಯ ಉದ್ದೇಶವಾಗಿದ್ದರೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ 16 ಟಿಎಂಸಿ ಕುಡಿಯುವ ನೀರೊದಗಿಸಬಹುದು. ಬೆಂಗಳೂರಿಗೆ ಈ ಯೋಜನೆಯಿಂದ 2.5 ಟಿಎಂಸಿ ನೀರು ಬಳಸಿಕೊಳ್ಳಬಹುದು. ಆದರೆ ಪ್ರತಿ ಹಂತದಲ್ಲೂ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತಾರಾಜ್ಯ ವ್ಯಾಜ್ಯವಾಗಿ ಬದಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡುತ್ತದೆಯೇ? ನೀಡಿದರೆ ಯೋಜನೆ ಪೂರ್ಣಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿ ಎಷ್ಟುಎಂಬ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ.

ಲಿಂಗಮನಕ್ಕಿ ಜಲಾಶಯ ಯೋಜನೆ

ಶಿವಮೊಗ್ಗ ಜಿಲ್ಲೆಯ ಲಿಂಗಮನಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಬಗ್ಗೆ ಅಧ್ಯಯನ ವರದಿ ಸಲ್ಲಿಸಲು ರಚಿಸಿದ್ದ ಸಮಿತಿ ಸಾಧ್ಯತೆ ಬಗ್ಗೆ ವರದಿ ನೀಡಿದೆ. ಯೋಜನೆ ಅನುಷ್ಠಾನವಾದರೆ ಜಲಾಶಯದಿಂದ 30 ಟಿಎಂಸಿ ನೀರು ಬೆಂಗಳೂರಿಗೆ ಪೂರೈಸಬಹುದು. ಆದರೆ, 426 ಕಿ.ಮೀ. ದೂರದಲ್ಲಿರುವ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ರು. ವ್ಯಯವಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ಸರ್ಕಾರದ ಈ ಯೋಜನೆಗೆ ರೈತರು, ಸ್ಥಳೀಯರು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತವಾಗಿದೆ. ಇವೆಲ್ಲವನ್ನೂ ಮೀರಿ ಸದ್ಯದಲ್ಲಿ ಯೋಜನೆ ಅನುಷ್ಠಾನ ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಸಮುದ್ರಕ್ಕೆ ಸೇರುವ ನೀರಿನ ಮೇಲೆ ಕಣ್ಣು

ಎರಡು ವರ್ಷದ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಟಿ.ಜಿ.ಸೀತಾರಾಮ್‌ ಅವರು ಸಮುದ್ರ ಸೇರುವ ನೀರನ್ನು ಶೇಖರಿಸಿ ಬೆಂಗಳೂರಿಗೆ ಕೊಡುವ ಬಗ್ಗೆ ವರದಿ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ಹಾಗೂ ಇತರೆ ನದಿಗಳಿಂದ ವಾರ್ಷಿಕ ಸುಮಾರು 240 ಟಿಎಂಸಿ ನೀರು ಸಮುದ್ರ ಸೇರುತ್ತದೆ. ಹಾಗಾಗಿ ಮಂಗಳೂರು ಬಳಿ ಜಲಾಶಯ ನಿರ್ಮಿಸಿ ಸಮುದ್ರ ಸೇರುವ ನೀರನ್ನು ಸಂಗ್ರಹಿಸಿ ಬೆಂಗಳೂರು ಮತ್ತು ಮಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಿದ್ದರು.

ಕಾರ್ಯ ಸಾಧ್ಯತಾ ವರದಿ ಇನ್ನು ನಗರಾಭಿವೃದ್ಧಿ ಇಲಾಖೆಯಲ್ಲೇ ಉಳಿದಿದೆ. ಈ ಯೋಜನೆ ಅನುಷ್ಠಾನಗೊಳಿಸಬೇಕಾದರೆ ಸಾವಿರಾರು ಕೋಟಿ ರು. ವೆಚ್ಚ ಮಾಡಬೇಕಾಗುತ್ತದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಪ್ಪಿಗೆ ಪಡೆಯಬೇಕು. ಒಂದು ವೇಳೆ ಈ ಯೋಜನೆ ಸಾಕಾರವಾದರೆ ಬೆಂಗಳೂರಿಗೆ ಮತ್ತೊಂದು ಜಲಮೂಲವಾಗುತ್ತದೆ. ಇದು ಭವಿಷ್ಯದಲ್ಲಿ ಕೈಗೋಡಬಹುದು. ಸದ್ಯಕ್ಕಂತೂ ಇದರಿಂದ ಯಾವುದೇ ಲಾಭವಿಲ್ಲ.

ಜಲಮಂಡಳಿಯ ಪ್ರಮುಖ ಯೋಜನೆಗಳು:

ಯೋಜನೆ ಅನುಷ್ಠಾನಗೊಂಡ ವರ್ಷ ನೀರಿನ ಪ್ರಮಾಣ

ಕಾವೇರಿ 1ನೇ ಹಂತ 1974 135 ಎಂಎಲ್‌ಡಿ

ಕಾವೇರಿ 2ನೇ ಹಂತ 1982 135 ಎಂಎಲ್‌ಡಿ

ಕಾವೇರಿ 3ನೇ ಹಂತ 1995 270 ಎಂಎಲ್‌ಡಿ

ಕಾವೇರಿ 4ನೇ ಹಂತ 1ನೇ ಘಟ್ಟ- 2006 270 ಎಂಎಲ್‌ಡಿ

ಕಾವೇರಿ 4ನೇ ಹಂತ 2ನೇ ಘಟ್ಟ- 2012 500 ಎಂಎಲ್‌ಡಿ

(ಅರ್ಕಾವತಿ, ತಿಪ್ಪಗೊಂಡನಹಳ್ಳಿ ಜಲಾಶಯ ಸ್ಥಗಿತಗೊಂಡಿದೆ)

ನೀರಿನ ಬೇಡಿಕೆ, ಕೊರತೆ

ಜಲಮಂಡಳಿ ಅಧಿಕೃತ ಅಂದಾಜು (ಅಂತರ್ಜಲ ಸೇರಿ)

ವರ್ಷ ಬೇಡಿಕೆ (ಟಿಎಂಸಿ) ಕೊರತೆ (ಟಿಎಂಸಿ)

2021 27.1 0.4

2031 53.90 16.51

2041 72.40 28.56

2051 88.25 35.39

 

ಲಿಂಗನಮಕ್ಕಿ ಜಲಾಶಯ(ಶರಾವತಿ)ದಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಯೋಜನೆಗೆ ಆ ಭಾಗದ ರೈತರು, ಸ್ಥಳೀಯರು, ಪರಿಸರವಾದಿಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳ ವಿರೋಧವಿದೆ. ಹಾಗಾಗಿ ಈ ಯೋಜನೆ ಕಾರ್ಯಗತವಾಗುವುದು ಕಷ್ಟ. ಏಕೆಂದರೆ, ಈ ಯೋಜನೆ ಅನುಷ್ಠಾನದಿಂದ ಅಲ್ಲಿನ ಪಶ್ಚಿಮ ಘಟ್ಟದ ಸೂಕ್ಷ್ಮವಲಯದ ಜೀವವೈವಿಧ್ಯಕ್ಕೆ ಧಕ್ಕೆಯಾಗಲಿದೆ. ಅಲ್ಲದೆ, ಸ್ಥಳೀಯವಾಗಿ ನೀರಿನ ಕೊರತೆ ಉಂಟಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ನದಿ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ, ಈ ಯೋಜನೆಗೆ ಸಾವಿರಾರು ಕೋಟಿ ರು. ಹಣ ಹಾಗೂ ಸಮಯದ ಅವಶ್ಯಕತೆಯಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ಎಚ್ಚರಬಹಿಸುವುದು ಸೂಕ್ತ.

-ಯಲ್ಲಪ್ಪರೆಡ್ಡಿ , ಪರಿಸರ ತಜ್ಞ.

 

ಬೆಂಗಳೂರಿಗೆ ಕಾವೇರಿ ನದಿಯ ಪ್ರಮುಖ ಜಲಮೂಲವಾಗಿದೆ. ಕಾವೇರಿಯ ಐದು ಹಂತದ ಯೋಜನೆಯಿಂದ ನಗರಕ್ಕೆ ಸುಮಾರು 30 ಟಿಎಂಸಿ ನೀರು ಲಭ್ಯವಾಗುತ್ತದೆ. ಮುಂದೆ ಬೇಡಿಕೆ ಹೆಚ್ಚಾದಂತೆ ನೀರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಜಲಮಂಡಳಿ ಹಾಗೂ ಸರ್ಕಾರ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಕಾವೇರಿ ಜಲಮೂಲವೊಂದನ್ನೇ ನೆಚ್ಚಿಕೊಳ್ಳದೆ ನಗರದ ಕೆರೆಗಳ ಪುನಶ್ಚೇತನ ಮಾಡಬೇಕು. ಪ್ರತಿ ಮನೆಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕು. ತ್ಯಾಜ್ಯದ ನೀರನ್ನು ಕುಡಿಯುವ ಮಟ್ಟಕ್ಕೆ ಶುದ್ಧೀಕರಿಸಿ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನಗರದ ಜನ ಕೂಡ ಸ್ವ ಪ್ರೇರಣೆಯಿಂದ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಮುಂದೆ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ.

-ಕ್ಯಾ.ಎಸ್‌.ರಾಜಾ ರಾವ್‌, ನೀರಾವರಿ ತಜ್ಞ

 

ವರದಿ : ಮೋಹನ್‌ ಹಂಡ್ರಂಗಿ/ಸಂಪತ್‌ ಕುಮಾರ್‌ ಡಿ.