ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಮೆರಿಕದ 45ನೇ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭಗೊಂಡಿದ್ದು, ಸಮಾರಂಭದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಾಷಿಂಗ್ಟನ್(ಜ.20): ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಮೆರಿಕದ 45ನೇ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭಗೊಂಡಿದ್ದು, ಸಮಾರಂಭದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇಂದು ವಾಷಿಂಗ್ಟನ್ನಿನಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ವಿಶ್ವದ ಗಣ್ಯಾತಿಗಣ್ಯರು, ಸಹಸ್ರಾರು ಭಾರತೀಯರು ಪಾಲ್ಗೊಳ್ಳಲಿದ್ದಾರೆ. "ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೆ ಏರಿಸೋಣ' ಎಂಬ ಉದ್ಘೋಷದಲ್ಲಿ ಸಮಾರಂಭ ಆಯೋಜನೆಗೊಂಡಿದೆ. ಈ ಹಿನ್ನೆಲೆ ವಾಷಿಂಗ್ಟನ್ನಿನ ಸುತ್ತ ಮುತ್ತ 100 ವೃತ್ತಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಅಮೆರಿಕ ಗುಪ್ತ ಚರ ಏಜೆನ್ಸಿಯ 28 ಸಾವಿರ ಸಿಬಂದಿ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ.

ಆದರೆ ಟ್ರಂಪ್ ಅಧಿಕಾರ ಸ್ವೀಕರಿಸುವ ಮುನ್ನವೇ ಅಮೆರಿಕನ್ ಪ್ರೆಸ್ ಕಾರ್ಪೊರೇಶನ್‌ ಮತ್ತು ಶ್ವೇತ ಭವನ ಪತ್ರಕರ್ತರು ಟ್ರಂಪ್‌'ಗೆ ಖಡಕ್‌ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿದ್ದಾರೆ. "ನಮ್ಮ ವರದಿಗಾರಿಕೆಯ ನಿಯಮಗಳನ್ನು ನಾವು ರೂಪಿಸುತ್ತೇವೆ; ನೀವಲ್ಲ; ನಮ್ಮ ಓದುಗರಿಗೆ, ವೀಕ್ಷಕರಿಗೆ ಏನನ್ನು ಕೊಡಬೇಕು ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ; ನೀವಲ್ಲ' ಎಂದು ಖಡಕ್‌ ಆಗಿ ಎಚ್ಚರಿಕೆ ನೀಡಿದ್ದಾರೆ.