ಮುಂಬೈ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಮಹಾರಾಷ್ಟ್ರದ ತನ್ನ 121 ಶಾಸಕರಿಗೆ ಬಿಜೆಪಿ ಹೊಸ ಕೆಲಸವೊಂದನ್ನು ನೀಡಿದೆ. ಮತದಾರರ ಜತೆ ಸಂಪರ್ಕ ಸಾಧಿಸುವ ‘ಸಂಪರ್ಕ ಅಭಿಯಾನ’ದ ಭಾಗವಾಗಿ ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 150 ಕಿ.ಮೀ.  ನಡೆಯ ಬೇಕು. ಈ ವೇಳೆ ಕನಿಷ್ಠ 150 ಕಾರ್ಯಕರ್ತರು ಶಾಸಕರ ಜತೆ ಯಲ್ಲಿರಬೇಕು. ಅಭಿಯಾನದ ವೇಳೆ ಒಂದು ತಾಸು ಶ್ರಮದಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಪಕ್ಷ ಸಂಘಟನೆಗಾಗಿ ಈ ಅಭಿಯಾನ ಈಗಾಗಲೇ ಆರಂಭ ವಾಗಿದೆ. ಗಾಂಧೀಜಿ ಪುಣ್ಯ ತಿಥಿ ದಿನವಾದ ಜ.30 ರೊಳಗೆ ಈ ಅಭಿಯಾನವನ್ನು ಎಲ್ಲ ಶಾಸಕರೂ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಬಿಜೆಪಿಯ ಈ ಸೂಚನೆಗೆ ಕೆಲವು ಶಾಸಕರ ಆಕ್ಷೇಪವೂ ವ್ಯಕ್ತವಾಗಿದೆ.

ಪಾದಯಾತ್ರೆ ವೇಳೆ  ಪೆಟ್ರೋಲ್ ಬೆಲೆ ಏರಿಕೆ ಪ್ರಶ್ನಿಸಿದರೆ, ಏನು ಮಾಡುವುದು. ಹಲವೆಡೆ ಮಳೆ ಕೊರತೆಯಿಂದ ಜನರು ಬಿತ್ತನೆಯನ್ನೇ ಮಾಡಿಲ್ಲ. ಅಂತಹ ಪ್ರದೇಶಕ್ಕೆ ಹೋಗಿ ಸಮಸ್ಯೆ ಆಲಿಸುವುದಾದರೂ ಹೇಗೆ ಎಂದು ಕೆಲ ಶಾಸಕರು ಪ್ರಶ್ನೆ ಎತ್ತಿದ್ದಾರೆ.