ಬೆಂಗಳೂರು [ಸೆ.04]:  ‘ಹಿಂದೆ ನಿಮ್ಮ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿದ್ರಲ್ಲಾ ಆಗ ಉಪ್ಪು ತಿಂದು ಹೋಗಿದ್ರಾ? ಇಲ್ಲಾ ಸಕ್ಕರೆ ತಿಂದು ಹೋಗಿದ್ರಾ? ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ? ಸಕ್ಕರೆ ತಿಂದಿದ್ದಕ್ಕಾ? ಅಥವಾ ಉಪ್ಪು ತಿಂದಿದ್ದಕ್ಕಾ?’ ಎಂದು ವಿ.ಎಸ್‌. ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ಇಬ್ಬರು ಉಪಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಕೆಲ ಶಾಸಕರು ತಮ್ಮ ಮನೆಗೆ ಬಂದು 5 ಕೋಟಿ ರು. ಹಣ ಇಟ್ಟು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿಸುವಂತೆ ಒತ್ತಡ ಹೇರಿದ್ದರು ಎಂದು ಶಾಸಕ ಶ್ರೀನಿವಾಸಗೌಡ ಸದನದಲ್ಲಿಯೇ ಆರೋಪ ಮಾಡಿದ್ದರು. ಈ ಬಗ್ಗೆ ಐಟಿ, ಇ.ಡಿ.ಯವರು ಇದುವರೆಗೂ ಸ್ವಯಂಪ್ರೇರಿತ ದೂರು ಏಕೆ ದಾಖಲಿಸಿಲ್ಲ? ಸದನದಲ್ಲಿ ನೀಡಿದ ಹೇಳಿಕೆ ಸಾರ್ವಜನಿಕ ದಾಖಲೆ ಅಲ್ಲವಾ? ಯಡಿಯೂರಪ್ಪ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ದೂರವಾಣಿ ಮೂಲಕ ಮಾತನಾಡಿದ್ದರಲ್ಲಾ ಅದರ ತನಿಖೆ ಏಕೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಕೈ ಮುಗಿದು ಕೇಳುತ್ತೇನೆ-ಡಿಕೆಶಿ ಅಣ್ಣಾ ಕ್ಷಮಿಸಿ ಎಂದ ಶ್ರೀರಾಮುಲು

ನಾವು ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಎಂದೂ ಬಳಸಿಕೊಳ್ಳಲಿಲ್ಲ. ಅಧಿಕಾರದಲ್ಲಿದ್ದಾಗ ಯಾರನ್ನೂ ಜೈಲಿಗೆ ಹಾಕಲಿಲ್ಲ. ಆಡಿಯೋ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿದ್ದರೆ ಏನಾಗುತ್ತಿತ್ತು? ದ್ವೇಷ ರಾಜಕಾರಣ ಎನ್ನುವಂತಾಗುತ್ತಿತ್ತು. ಆದರೆ, ಇಂದು ಮೋದಿ, ಅಮಿತ್‌ ಶಾ ಮಾಡುತ್ತಿರುವುದು ದ್ವೇಷದ ರಾಜಕಾರಣ ಅಲ್ಲವೆ ಎಂದು ಪ್ರಶ್ನಿಸಿದರು. ವಿಧಾನಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.