ಚಿತ್ರದುರ್ಗ [ಸೆ.03]: ವಿಚಾರಣೆ ಹಿನ್ನೆಲೆಯಲ್ಲಿ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಶ್ರೀರಾಮುಲು ಕ್ಷಮೆ ಯಾಚಿಸಿದ್ದಾರೆ. 

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ತಂದೆಯ ಪೂಜಾ ಕಾರ್ಯಕದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮರುಕ ವ್ಯಕ್ತಪಡಿಸಿದ್ದು, ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ನಾನು ಟೀಕೆ ಮಾಡುವುದಿಲ್ಲ. ಡಿಕೆಶಿ ಕೆಣಕಿ ಮಾತನಾಡುತ್ತಿದ್ದರು. ಹಿಂದೆ ರಾಜಕೀಯ ವಿಚಾರಗಳ ಸಂಬಂಧ ನಾನು ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿನಿಂದ ಯಾವ ಮಾತನ್ನು ನಿಮ್ಮ ವಿರುದ್ಧ ಮಾತನಾಡಿಲ್ಲ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ ಎಂದಿದ್ದಾರೆ. 

ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು. ವೖಯಕ್ತಿಕವಾಗಿ ನಾನು ನಿಮ್ಮನ್ನು ಟೀಕೆ ಮಾಡಿಲ್ಲ. ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತದೆ. ಕಷ್ಟದಲ್ಲಿದ್ದ ವೇಳೆ ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುವುದು ಸಹ ಎಂದರು.   

ಡಿ ಕೆ ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ರಾಜ್ಯದಲ್ಲಿ ಮಧ್ಯಂತರ ಚುನಾವಣೆ  ಸಂಬಂಧ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀರಾಮುಲು, ಅವರು ಕನಸು ಕಾಣುತ್ತಿದ್ದಾರೆ.  ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಹೊರಕ್ಕೆ ಇಟ್ಟಿದ್ದಾರೆ. ಅವರನ್ನು ಮೂಲೆಗುಂಪು ಮಾಡಿದ್ದು, ಅವರ ಕನಸೆಂದೂ ನನಸಾಗದು ಎಂದರು.