ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಧೋನಿ, ಸೋನಿಯಾ ಗಾಂಧಿ ಮತ್ತಿಬ್ಬರು ಇರುವ ಫೋಟೋದೊಂದಿಗೆ ಧೋನಿ ಕಾಂಗ್ರೆಸ್‌ ಸೇರಿದ್ದಾರೆ ಎಂಬ ಸಂದೇಶ ಹಾಕಲಾಗಿದ್ದು, ಅದೀಗ ವೈರಲ್‌ ಆಗಿದೆ. 

ಆದರೆ ನಿಜಕ್ಕೂ ಧೋನಿ ರಾಜಕೀಯ ಪಕ್ಷವೊಂದನ್ನು ಸೇರಿ ರಾಜಕೀಯಕ್ಕೆ ಇಳಿದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಫೋಟೋ ಶಾಪ್‌ ಮೂಲಕ ಎಡಿಟ್‌ ಮಾಡಿದ ಫೋಟೋ ಬಳಸಿ ಸುಳ್ಳುಸುದ್ದಿ ಹರಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಬೂಮ ಲೈವ್‌ ಸುದ್ದಿ ಸಂಸ್ಥೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದಾಗ ವೈರಲ್‌ ಆಗಿರುವ ಈ ಫೋಟೋ 2007ರದ್ದು ಎಂದು ತಿಳಿದುಬಂದಿದೆ. ಈ ಕುರಿತ ಹಲವಾರು ವರದಿಗಳು ಲಭ್ಯವಿದ್ದು, ಅವುಗಳಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಮತ್ತು ಭಾರತೀಯ ಟಿ20 ಕ್ರಿಕೆಟ್‌ ತಂಡದ ಆಟಗಾರೊಂದಿಗೆ ನಡೆದ ಸಭೆಯ ಫೋಟೋ ಇದು ಎಂದು ಹೇಳಲಾಗಿದೆ.

2007ರಲ್ಲಿ ದಕ್ಷಿಣ ಆಪ್ರಿಕಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ವಿಶ್ವ ಚಾಂಪಿಯನ್‌ ಶಿಪ್‌ ಪಟ್ಟಗಳಿಸಿತ್ತು. ಆ ಪ್ರಯುಕ್ತ ಅಕ್ಟೋಬರ್‌ 30, 2007ರಂದು ಧೋನಿ ನೇತೃತ್ವ ದ ಟೀಮ್‌ ಇಂಡಿಯಾ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ನವದೆಹಲಿಯಲ್ಲಿ ಭೇಟಿ ಮಾಡಿತ್ತು. ಆಗ ಧೋನಿ ತಮ್ಮ ಆಟೋಗ್ರಾಫ್‌ ಪಡೆದ ಬ್ಯಾಟ್‌ ಅನ್ನು ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದರು.

ಮೂಲ ಫೋಟೋದಲ್ಲಿ ಎಸ್‌.ಶ್ರೀಶಾಂತ್‌, ಇರ್ಫಾನ್‌ ಪಠಾಣ್‌ ಕೂಡ ಇದ್ದಾರೆ. ಆದರೆ ವೈರಲ್‌ ಆಗಿರುವ ಫೋಟೋದಲ್ಲಿ ಎಸ್‌.ಶ್ರೀಶಾಂತ್‌ ತಲೆಯ ಭಾಗವನ್ನು ಕತ್ತಲಿಸಲಾಗಿದೆ.