ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಗಹಗಹಿಸಿ ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ವೈರಲ್ ಚೆಕ್: ಪುಲ್ವಾಮಾ ದಾಳಿಯ ವಿಡಿಯೋ ಬಯಲು?

ಯುವ ಕಾಂಗ್ರೆಸ್‌ ಮೋದಿ ಹಾಗೂ ನಿತೀಶ್‌ ಕುಮಾರ್‌ ವೇದಿಕೆ ಮೇಲೆ ಕುಳಿತು ನಗುತ್ತಿರುವ ಫೋಟೋದ ಜೊತೆ ಇತರ ಕೆಲವು ಫೋಟೋಗಳನ್ನು ಸೇರಿಸಿ ಟ್ವೀಟ್‌ ಮಾಡಿದ್ದು, ಅಸಂವೇದನೆಗೂ ಒಂದು ಒಂದು ಮಿತಿ ಇದೆ ಎಂದು ಅಡಿ ಟಿಪ್ಪಣಿಯನ್ನೂ ಬರೆದಿದೆ. ಇಡೀ ದೇಶವೇ ಯೋಧರ ಸಾವಿಗೆ ದುಃಖ ಪಡುತ್ತಿದ್ದರೆ ನಿತೀಶ್‌ ಕುಮಾರ್‌ ಜೊತೆ ಮೋದಿ ರಾಜಕೀಯ ಚರ್ಚೆಯಲ್ಲಿ ತೊಡಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ. ಮುಂಬೈ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ನಿರೂಪಮ್‌ ಮತ್ತು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್‌ ಅವರು ಸಹ ಟ್ವೀಟ್‌ ಮಾಡಿ ಮೋದಿ ಹಾಗೂ ನಿತೀಶ್‌ ಕುಮಾರ್‌ ಅವರ ವರ್ತನೆಯನ್ನು ಟೀಕಿಸಿದ್ದಾರೆ.

ಆದರೆ, ಕಾಂಗ್ರೆಸ್‌ ಹೇಳುತ್ತಿರುವಂತೆ ಇದು ಪುಲ್ವಾಮಾ ದಾಳಿಯ ಬಳಿಕ ತೆಗೆಯಲಾದ ಫೋಟೋ ಅಲ್ಲ. ಫೆ.17ರಂದು ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ವೇಳೆ ಮೋದಿ ಹಾಗೂ ನಿತೀಶ್‌ ಕುಮಾರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ನಿಜವಾದರೂ ಕಾಂಗ್ರೆಸ್‌ ಟ್ವೀಟ್‌ ಮಾಡಿರುವ ಫೋಟೊ 2015ರದ್ದಾಗಿದೆ. 2015 ಜು.26ರಂದು ಇಂಡಿಯನ್‌ ಎಕ್ಸ್‌ಪ್ರೆಸ್‌ನ ಪ್ರಕಟಿಸಿದ ಲೇಖನವೊಂದರಲ್ಲಿ ಬಳಸಲಾದ ಫೋಟೋ ಇದಾಗಿದೆ.