ಎರಡು ಗ್ರಾಮಗಳಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಜಾತ್ರೆಯ ಅಂಗವಾಗಿ, ಜಾತ್ರೆಗೆ ಮುಂಚಿನ ಐದು ಮಂಗಳವಾರಗಳಂದು ಗ್ರಾಮಸ್ಥರು ಊರನ್ನೇ ಖಾಲಿ ಮಾಡುತ್ತಾರೆ. ಸೂರ್ಯಾಸ್ತದ ನಂತರವೇ ಮನೆಗೆ ಮರಳುವ ಈ ಪದ್ಧತಿಯು 300 ವರ್ಷಗಳ ಇತಿಹಾಸವನ್ನು ಹೊಂದಿದೆ.
ಈರಪ್ಪ ನಾಯ್ಕರ್
ಧಾರವಾಡ (ಕಲಘಟಗಿ): ಈ ಎರಡು ಊರುಗಳಲ್ಲಿ ಪ್ರತಿ ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಖಾಲಿ. ಪ್ರತಿ ಮನೆ, ಅಂಗಡಿ-ಮುಗ್ಗಟ್ಟುಗಳಿಗೆ ಬೀಗ!
ಇದು ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಚವರಗುಡ್ಡ ಗ್ರಾಮಗಳಲ್ಲಿನ ಸಂಪ್ರದಾಯ. ಮಿಶ್ರಿಕೋಟಿ ಗ್ರಾಮದಲ್ಲಿನ ಗ್ರಾಮ ದೇವತೆಯರಾದ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆಯ ಮುಂಚೆ ಬರುವ 5 ಮಂಗಳವಾರಗಳಂದು ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿರುವ ಪದ್ಧತಿ.
ಏನಿದು-ಏಕಿದು?
ಮಿಶ್ರಿಕೋಟಿಯಲ್ಲಿ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆಯನ್ನು 300ಕ್ಕೂ ಅಧಿಕ ವರ್ಷದಿಂದ ಆಚರಿಸಲಾಗುತ್ತಿತ್ತಂತೆ. ಆದರೆ, ಅದ್ಯೇಕೋ ಮಧ್ಯೆ ನಿಂತು ಹೋಗಿತ್ತು. 2013ರಲ್ಲಿ 2 ಊರುಗಳ ಹಿರಿಯರು ಸೇರಿಕೊಂಡು ಗ್ರಾಮದೇವತೆಯರ ಜಾತ್ರೆ ಮತ್ತೆ ಆಚರಿಸಲು ನಿರ್ಧರಿಸಿದ್ದಾರೆ. ಅದರಂತೆ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದೇವತೆಯರ ಜಾತ್ರೆ ಸಂಪ್ರದಾಯದಂತೆ ನಡೆಯುತ್ತಿದೆ.
ಜಾತ್ರೆ ನಡೆಯುವ ದಿನದ ಮುಂಚೆ ಬರುವ 5 ಮಂಗಳವಾರ ಎಲ್ಲರೂ ಊರು ಬಿಟ್ಟು ಸೂರ್ಯಾಸ್ತದ ಬಳಿಕ ಮತ್ತೆ ಮನೆ ಸೇರಬೇಕು. ಅಂದು ಸಂಜೆವರೆಗೂ ಯಾರೂ ಊರಲ್ಲಿ ಇರುವಂತಿಲ್ಲ ಎಂಬುದು ಸಂಪ್ರದಾಯ. ಅದರಂತೆ ಬೆಳಗ್ಗೆಯೇ ಎದ್ದು ಎಲ್ಲರೂ ಮನೆಯಲ್ಲೇ ಅಡುಗೆ ಕಟ್ಟಿಕೊಂಡು ಹೊಲ-ಗದ್ದೆಗಳಲ್ಲಿ ಸೇರಿಕೊಳ್ಳುತ್ತಾರೆ. ಅಲ್ಲೇ ಊಟ ಮಾಡಿ, ಹರಟೆ ಹೊಡೆದು, ಆಟ ಆಡಿ ಮತ್ತೆ ಮನೆ ಸೇರುವುದು ಸಂಜೆಗೆ. ಅಂದು ಯಾರೊಬ್ಬರು ಕೆಲಸಕ್ಕೂ ಹೋಗಲ್ಲ.
ಮಾರ್ಚ್ 1ರಂದು ಮಿಶ್ರಿಕೋಟಿಯಲ್ಲಿ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆ ಇದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ದೇವಿಯರ ಮೆರವಣಿಗೆ ನಡೆಯಲಿದೆ. ಭಂಡಾರ ಜಾತ್ರೆಯೇ ಇಲ್ಲಿನ ವಿಶೇಷ. ಊರು ಬಿಡಲು ಇಂದು ಕೊನೆಯ ಮಂಗಳವಾರ.
ಚವರಗುಡ್ಡ ಏಕೆ?
ಜಾತ್ರೆ ನಡೆಯುವುದು
ಮಿಶ್ರಿಕೋಟಿ ಮಗಳಾಗಿರುವ ದುರ್ಗಾ ದೇವಿಯನ್ನು ಕನ್ಯೆಯಾಗಿ ಸ್ವೀಕರಿಸಿ ಪೂಜಿಸುವ ಹುಲ್ಲಂಬಿ ಗ್ರಾಮದವರು ಜಾತ್ರೆಯ ವೇಳೆ ಮಿಶ್ರಿಕೋಟಿಗೆ ಬಂದು ಉಡಿ ತುಂಬಿ ಹೋಗುವುದು ಪದ್ಧತಿ.
ಇದನ್ನೂ ಓದಿ: ನಿನ್ನ ಮೊಬೈಲ್ ಪಾಸ್‌ವರ್ಡ್ ಹೆಂಡ್ತಿಗೆ ಕೊಡ್ತೀಯಾ? ಸೈಯದ್ ನಾಸಿರ್ ಹುಸೇನ್ ತರಾಟೆ
15 ವರ್ಷಗಳಿಂದ 5 ವರ್ಷಕ್ಕೊಮ್ಮೆ ಆಚರಣೆ
ಗ್ರಾಮದೇವಿ ಜಾತ್ರೆಯೂ ಮಿಶ್ರಿಕೋಟಿ, ಚವರಗುಡ್ಡ ಗ್ರಾಮಗಳ ನಡುವೆ ಬಾಂಧವ್ಯ ಬೆಸೆಯುವ ಹಬ್ಬ. 200-300 ವರ್ಷಗಳ ಹಿಂದೆ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ, ಮಧ್ಯೆ ಜಾತ್ರೆ ಸ್ಥಗಿತಗೊಂಡಿತ್ತು. ಇದೀಗ 15 ವರ್ಷಗಳಿಂದ 5 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು , ಶ್ರೀ ಗ್ರಾಮದೇವಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಂದ್ರ ಲಂಗೋಟಿ ಹೇಳುತ್ತಾರೆ.
ನಮ್ಮೂರು ಕಲಘಟಗಿ ತಾಲೂಕಲ್ಲೇ ದೊಡ್ಡ ಗ್ರಾಮ. ಹಿಂದೆ ಜಾತ್ರೆ ಬಂದ್ ಆಗಿತ್ತು. ಊರಿನ, ನಾಡಿನ ಒಳತಿಗಾಗಿ ಮತ್ತೆ ಜಾತ್ರೆ ಮಾಡುತ್ತಿದ್ದೇವೆ. ಹಿರಿಯರು ತಿಳಿಸಿದ ಸಂಪ್ರದಾಯದಂತೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದೇವೆ. ಜಾತ್ರೆಯಿಂದ ಎರಡು ಗ್ರಾಮಗಳಲ್ಲಿ ಪ್ರೀತಿ, ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಐ.ಎಸ್. ಕಲಘಟಗಿ ಹೇಳುತ್ತಾರೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಶೀಘ್ರದಲ್ಲೇ ಮತ್ತೊಂದು ಹೊಡೆತ, ಸೈಟ್, ಮನೆ, ಫ್ಲ್ಯಾಟ್ ಖರೀದಿಸುವ ಕನಸು ಕಂಡವರಿಗೆ ಶಾಕ್!


