ಚನ್ನಪಟ್ಟಣ ತಾಲೂಕಿನಲ್ಲಿ ಶೇ.100ರಷ್ಟು ಎಸ್ಎಸ್ಎಲ್‌ಸಿ ಫಲಿತಾಂಶ ತರುವ ಗುರಿಯೊಂದಿಗೆ, ತಹಶೀಲ್ದಾರ್ ಗಿರೀಶ್ ಅವರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪರೀಕ್ಷಾ ಒತ್ತಡ ಕಡಿಮೆ ಮಾಡಿ, ಮೊಬೈಲ್ ಬಳಕೆಯಿಂದ ದೂರವಿರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ

ರಾಮನಗರ: ಎಸ್ಎಸ್ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚನ್ನಪಟ್ಟಣ ತಾಲೂಕಿನಲ್ಲಿ ವಿನೂತನ ಹಾಗೂ ಮಾದರಿ ಕ್ರಮವೊಂದು ಜಾರಿಯಲ್ಲಿದೆ. ಪರೀಕ್ಷಾ ಒತ್ತಡ, ಆತಂಕ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳನ್ನು ದೂರವಿಡುವ ಉದ್ದೇಶದಿಂದ, ಗಿರೀಶ್, ಚನ್ನಪಟ್ಟಣ ತಹಶಿಲ್ದಾರ್, ಸ್ವತಃ ಸಂಜೆ ಸಮಯದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಈ ಅಭಿಯಾನದ ಮುಖ್ಯ ಗುರಿ, ಚನ್ನಪಟ್ಟಣ ತಾಲೂಕಿನಲ್ಲಿ ಈ ಬಾರಿ ಶೇ.100ರಷ್ಟು ಫಲಿತಾಂಶ ತರುವುದಾಗಿದೆ. ಅದಕ್ಕಾಗಿ ತಹಶಿಲ್ದಾರ್ ಗಿರೀಶ್ ಅವರು ನಿತ್ಯವೂ ಸಂಜೆ ವೇಳೆ ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ನೇರ ಸಂವಾದ ನಡೆಸುತ್ತಿದ್ದಾರೆ.

ದಿನಚರಿಯ ವಿಚಾರಣೆ

ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ, ಮಕ್ಕಳು ಹೇಗೆ ಅಧ್ಯಯನ ಮಾಡುತ್ತಿದ್ದಾರೆ, ದಿನಚರಿ ಹೇಗಿದೆ, ಪಾಠಾಭ್ಯಾಸಕ್ಕೆ ಅಗತ್ಯ ವಾತಾವರಣ ಇದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಪೋಷಕರಿಂದ ಮಕ್ಕಳ ಓದು, ಆಸಕ್ತಿ ಹಾಗೂ ಸವಾಲುಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವೇಳೆ, ಮಕ್ಕಳಿಗೆ ಅತಿಯಾಗಿ ಮೊಬೈಲ್ ನೀಡದಂತೆ ಹಾಗೂ ಪರೀಕ್ಷಾ ಸಮಯದಲ್ಲಿ ಅನಗತ್ಯ ಒತ್ತಡ ಹೇರದಂತೆ, ಟಿವಿ ನೋಡುವುದನ್ನು ಕಡಿಮೆ ಮಾಡವಂತೆ ಪೋಷಕರಲ್ಲಿ ಮನವಿ ಮಾಡುತ್ತಿದ್ದಾರೆ.

ಪರೀಕ್ಷೆ ಎಂದರೆ ಭಯವಲ್ಲ, ಆತ್ಮವಿಶ್ವಾಸದಿಂದ ಎದುರಿಸಬೇಕಾದ ಒಂದು ಹಂತ ಮಾತ್ರ ಎಂಬ ಸಂದೇಶವನ್ನು ತಹಶಿಲ್ದಾರ್ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಮೂಲಕ ತಿಳಿಸುತ್ತಿದ್ದಾರೆ. ಯಾವುದೇ ಆತಂಕವಿಲ್ಲದೇ, ಶಾಂತ ಮನಸ್ಸಿನಿಂದ ಪರೀಕ್ಷೆಗೆ ಸಿದ್ಧರಾಗುವಂತೆ ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದಾರೆ.

ಪೋಷಕರು ಉತ್ತೇಜನ ನೀಡುವಂತೆ ಒತ್ತು

ಇದಲ್ಲದೆ, ಸಂಜೆ ವೇಳೆಯಲ್ಲಿ ಪೋಷಕರ ಸಭೆಗಳನ್ನು ಆಯೋಜಿಸಿ, ಎಸ್ಎಸ್ಎಲ್ಸಿ ಪರೀಕ್ಷೆಯ ಮಹತ್ವ, ವಿದ್ಯಾರ್ಥಿಗಳ ಮೇಲೆ ಪೋಷಕರ ಪಾತ್ರ ಹಾಗೂ ಮನೆಯಲ್ಲಿನ ಓದು ಸಹಾಯಕ ವಾತಾವರಣದ ಅಗತ್ಯತೆಯನ್ನು ವಿವರಿಸುತ್ತಿದ್ದಾರೆ. ಪೋಷಕರು ಮಕ್ಕಳನ್ನು ಹೋಲಿಕೆ ಮಾಡದೆ, ಉತ್ತೇಜನ ನೀಡಬೇಕು ಎಂಬುದಕ್ಕೂ ವಿಶೇಷ ಒತ್ತು ನೀಡಲಾಗುತ್ತಿದೆ.

ಇನ್ನೊಂದೆಡೆ, ಪ್ರತಿವಾರವೂ ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಲಾಗುತ್ತಿದ್ದು, ಎಸ್ಎಸ್ಎಲ್‌ಸಿ ಪರೀಕ್ಷಾ ಸಿದ್ಧತೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿಗಳನ್ನು ನಡೆಸುವಂತೆ ಹಾಗೂ ಹೆಚ್ಚುವರಿ ಮಾರ್ಗದರ್ಶನ ನೀಡುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಒಟ್ಟಾರೆ, ಆಡಳಿತಾಧಿಕಾರಿಯೊಬ್ಬರು ತರಗತಿ ಕೊಠಡಿಯಿಂದ ವಿದ್ಯಾರ್ಥಿಗಳ ಮನೆವರೆಗೂ ನೇರವಾಗಿ ತಲುಪುತ್ತಿರುವ ಈ ವಿನೂತನ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಹಶಿಲ್ದಾರ್ ಗಿರೀಶ್ ಅವರ ಈ ಮಾನವೀಯ ಹಾಗೂ ಶಿಕ್ಷಣಪರ ಅಭಿಯಾನವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಚನ್ನಪಟ್ಟಣ ತಾಲೂಕಿನಲ್ಲಿ ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.