ವಿನಾಕಾರಣ ಜಗಳ ತೆಗೆದು ನನ್ನ ಮಗನ ಮೇಲೆ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ದಾದಾಗಿರಿ ನಡೆಸಿದ್ದಾನೆ. ಅಪ್ಪನ ಅಧಿಕಾರದ ಮದದಲ್ಲೇ ಹೀಗೆ ಅವನು ಗೂಂಡಾಗಿರಿ ಮಾಡಿದ್ದಾನೆ’ ಎಂದು ಹಲ್ಲೆಗೊಳಾಗಿರುವ ವಿದ್ವತ್‌ ತಂದೆ ಹಾಗೂ ಉದ್ಯಮಿ ಲೋಕನಾಥನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನನ್ನ ಮುಂದೆ ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕಾಲಿಗೆ ಮುತ್ತಿಟ್ಟು ಕ್ಷಮೆ ಕೇಳಬೇಕು ಎಂದು ಮೊಹಮ್ಮದ್‌ ನಲಪಾಡ್‌ ಸೂಚಿಸಿದ್ದ. ಅದನ್ನು ನಿರಾಕರಿಸಿದಕ್ಕೆ ವಿದ್ವತ್‌ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ವಿದ್ವತ್‌ ಸ್ನೇಹಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

 ‘ವಿನಾಕಾರಣ ಜಗಳ ತೆಗೆದು ನನ್ನ ಮಗನ ಮೇಲೆ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ದಾದಾಗಿರಿ ನಡೆಸಿದ್ದಾನೆ. ಅಪ್ಪನ ಅಧಿಕಾರದ ಮದದಲ್ಲೇ ಹೀಗೆ ಅವನು ಗೂಂಡಾಗಿರಿ ಮಾಡಿದ್ದಾನೆ’ ಎಂದು ಹಲ್ಲೆಗೊಳಾಗಿರುವ ವಿದ್ವತ್‌ ತಂದೆ ಹಾಗೂ ಉದ್ಯಮಿ ಲೋಕನಾಥನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆ ಪ್ರಕರಣದ ಬಳಿಕ ಮೊದಲ ಬಾರಿ ಮಾಧ್ಯಮಗಳ ಜೊತೆ ಮಲ್ಯ ಆಸ್ಪತ್ರೆ ಬಳಿ ಬುಧವಾರ ಮಾತನಾಡಿದ ಅವರು, ಕೆಫೆಯಲ್ಲಿ ಹಲ್ಲೆ ನಡೆಸಿದ ಬಳಿಕ ಮಗನನ್ನು ಕೊಲ್ಲುವ ಉದ್ದೇಶದಿಂದ ಆಸ್ಪತ್ರೆಗೂ ನಲಪಾಡ್‌ ನುಗ್ಗಿದ್ದಾನೆ. ತನ್ನ ಅಪ್ಪ ಶಾಸಕ ಎಂಬ ದುರಂಹಕಾರದಲ್ಲಿ ಅವನು ನಡೆದುಕೊಂಡಿದ್ದಾನೆ ಎಂದು ಕಿಡಿಕಾರಿದರು.

ಈ ಘಟನೆ ಕುರಿತು ಕಾನೂನು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಸವಿಸ್ತಾರವಾಗಿ ಮಾತನಾಡುತ್ತೇನೆ. ತಾವು ಕಾನೂನಿಗಿಂತ ದೊಡ್ಡವರು ಎಂಬ ಅಹಂಕಾರ ಹ್ಯಾರಿಸ್‌ ಹಾಗೂ ಅವರ ಪುತ್ರನಿಗೆ ಇದೆ. ಈ ದರ್ಪದಲ್ಲಿ ಕೆಫೆಯಲ್ಲಿ ಸುಖಾಸುಮ್ಮನೆ ಜಗಳ ತೆಗೆದು ನನ್ನ ಮಗನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದರು.

ಮೊದಲೇ ಬೈಕ್‌ನಿಂದ ಬಿದ್ದು ವಿದ್ವತ್‌ ಕಾಲಿಗೆ ಪೆಟ್ಟಾಗಿತ್ತು. ಅದರ ನೋವಿನಲ್ಲಿದ್ದ ಮಗನಿಗೆ ನಲಪಾಡ್‌ ಹಿಂಸೆ ಕೊಟ್ಟಿದ್ದಾನೆ. ತನ್ನ ಕಾಲಿಗೆ ಪೆಟ್ಟಾಗಿದೆ ಎಂದು ಹೇಳಿದರೂ ಸಹ ಕೇಳದೆ ಕೆಫೆಯಲ್ಲಿ ಎರಡು ಬಾರಿ ಹಲ್ಲೆ ನಡೆಸಿದ್ದಾನೆ. ನಂತರ ಪಾರ್ಕಿಂಗ್‌ನಲ್ಲಿ ಕೂಡ ಹೊಡೆದು ಅಲ್ಲಿಂದ ಆಸ್ಪತ್ರೆಗೂ ನುಗ್ಗಿ ಗಲಾಟೆ ಮಾಡಿದ್ದಾನೆ ಎಂದು ಲೋಕನಾಥನ್‌ ದೂರಿದರು.

ಈ ಪ್ರಕರಣ ಸೂಕ್ತವಾಗಿ ತನಿಖೆ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.