24 ಸೆಕೆಂಡ್'ಗಳಿರುವ ಈ ಹೊಸ ವಿಡಿಯೋದಲ್ಲಿ ಜಮ್ಮು-ಕಾಶ್ಮೀರದ ಗಡಿ ಸಮೀಪವಿರುವ ನೌಶೇರಾ ಸೆಕ್ಟರ್'ನಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ ದೃಶ್ಯಗಳಿವೆ. ಮರಗಿಡಗಳಿಂದ ದಟ್ಟವಾದ ಬೆಟ್ಟದೊಳಗೆ ಅಡಗಿದ್ದ ಪಾಕಿಸ್ತಾನದ ಬಂಕರ್'ಗಳನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ.
ನವದೆಹಲಿ(ಮೇ 23): ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಬಾರ್ಡರ್ ಪೋಸ್ಟ್'ಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಸೇನೆಯೇ ಬಿಡುಗಡೆ ಮಾಡುವ ಮೂಲಕ ದಿಟ್ಟತನ ಪ್ರದರ್ಶಿಸಿದೆ.
ಮೂರು ವಾರಗಳ ಹಿಂದಷ್ಟೇ ಪಾಕಿಸ್ತಾನೀಯರು ಭಾರತದ ಗಡಿಯೊಳಗೆ ನುಗ್ಗಿ ಇಬ್ಬರು ಯೋಧರ ರುಂಡ ಕತ್ತರಿಸಿ ಹೋಗಿದ್ದರು. ಪಾಕಿಸ್ತಾನಕ್ಕೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುವುದಾಗಿ ಭಾರತ ಸರಕಾರ ಮತ್ತು ಸೇನೆ ಹೇಳಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಈ ಹೊಸ ವಿಡಿಯೋ ಬಿಡುಗಡೆಯಾಗಿರುವುದು ಗಮನಾರ್ಹ.
24 ಸೆಕೆಂಡ್'ಗಳಿರುವ ಈ ಹೊಸ ವಿಡಿಯೋದಲ್ಲಿ ಜಮ್ಮು-ಕಾಶ್ಮೀರದ ಗಡಿ ಸಮೀಪವಿರುವ ನೌಶೇರಾ ಸೆಕ್ಟರ್'ನಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ ದೃಶ್ಯಗಳಿವೆ. ಮರಗಿಡಗಳಿಂದ ದಟ್ಟವಾದ ಬೆಟ್ಟದೊಳಗೆ ಅಡಗಿದ್ದ ಪಾಕಿಸ್ತಾನದ ಬಂಕರ್'ಗಳನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ.
ಉಗ್ರಗಾಮಿಗಳು ಕಾಶ್ಮೀರಕ್ಕೆ ಕಾಲಿಡದಂತೆ ಮುನ್ನೆಚ್ಚರಿಕೆಯಾಗಿ ಈ ದಾಳಿ ನಡೆಸಿದ್ದೇವೆ. ಕಾಶ್ಮೀರಿ ಯುವಕರು ಉಗ್ರಗಾಮಿ ಚಟುವಟಿಕೆ ನಡೆಸಲು ಧೈರ್ಯ ತೋರಬಾರದೆಂದು ಈ ವಿಡಿಯೋ ಬಿಡುಗಡೆ ಮಾಡಿದ್ದೇವೆ ಎಂದು ಮೇಜರ್ ಜನರಲ್ ಅಶೋಕ್ ನರುಲಾ ಅವರು ಭವಿಷ್ಯದ ಉಗ್ರಗಾಮಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
"ಹಿಮ ಕರಗುವ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಗಡಿಯಲ್ಲಿ ದಾರಿ ಇನ್ನಷ್ಟು ಸಲೀಸಾಗುತ್ತದೆ. ಗಡಿ ಒಳನಸುವುವಿಕೆ ಕೂಡ ಸಲೀಸಾಗುತ್ತದೆ. ಇಂಥ ಉಗ್ರ ನಿರೋಧಕ ಕಾರ್ಯಾಚರಣೆಗಳನ್ನು ಹೆಚ್ಚೆಚ್ಚು ನಡೆಸಿದರೆ ಉಗ್ರರು ಗಡಿಯೊಳಗೆ ನುಸುಳುವ ಧೈರ್ಯ ತೋರಲಾರರು" ಎಂದು ನರುಲಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
