ಲಖನೌ[ಜ.21]: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಘೋಷಿಸಿದರೆ, ಆ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸಿದ್ಧವಿದೆ’ ಎಂಬ ಹೇಳಿಕೆಯನ್ನು ನೀಡುವ ಮೂಲಕ ವಿಎಚ್‌ಪಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಲೋಕ್‌ ಕುಮಾರ್‌ ಸಂಚಲನ ಮೂಡಿಸಿದ್ದಾರೆ. ಆದರೆ ಈ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ತಾನು ಹಾಗೆ ಹೇಳೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ಮಾತನಾಡಿದ ಅಲೋಕ್‌, ‘ಕಾಂಗ್ರೆಸ್‌ ನಮಗೆ (ವಿಎಚ್‌ಪಿಗೆ) ಎಲ್ಲ ಬಾಗಿಲು ಮುಚ್ಚಿದೆ. ವಿಎಚ್‌ಪಿಗೆ ಬಾಗಿಲು ತೆರೆದು, ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಭರವಸೆ ನೀಡಿದರೆ ಆ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಚಿಂತಿಸಬಹುದು’ ಎಂದು ಹೇಳಿದ್ದರು ಎಂದು ವರದಿಯಾಗಿತ್ತು.

ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದ್ದಂತೆಯೇ ‘ನನ್ನ ಹೇಳಿಕೆಯನ್ನು ಅಪಾರ್ಥ ಮಾಡಲಾಗಿದೆ. ಮಂದಿರ ನಿರ್ಮಾಣ ವಿಚಾರ ಸಂಸತ್ತಿನಲ್ಲಿ ಪ್ರಸ್ತಾಪವಾದರೆ ಅದಕ್ಕೆ ಬೆಂಬಲ ಕೋರಿ ವಿಎಚ್‌ಪಿ ಎಲ್ಲ ಪಕ್ಷಗಳಿಗೆ ಮನವಿ ಮಾಡಿಕೊಂಡಿದೆ. ಏಕೆಂದರೆ ಇದಕ್ಕೆ ರಾಜಕೀಯ ಒಮ್ಮತ ಅತ್ಯಗತ್ಯವಾಗಿದೆ. ಆದರೆ ಹಾಗಂತ ನಾವು ಯಾವು ಯಾವುದೋ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದಲ್ಲ’ ಎಂದರು.