ನವದೆಹಲಿ[ಜು.03]: ಈಗಾಗಲೇ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿರುವ ಐಎನ್‌ಎಸ್‌ ವಿರಾಟ್‌ ಯುದ್ಧ ನೌಕೆಯನ್ನು ಯಾವುದೇ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಬದಲು ಒಡೆಯಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ, ಈ ನಿರ್ಧಾರಕ್ಕೆ ನೌಕಾಪಡೆಯ ಮಾಜಿ ಯೋಧರಿಂದ ಆಕ್ಷೇಪ ವ್ಯಕ್ತವಾಗಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌, ಐಎನ್‌ಎಸ್‌ ವಿರಾಟ್‌ ಅನ್ನು ಯಾವುದೇ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವುದಿಲ್ಲ. ನೌಕೆಯನ್ನು ನಿರ್ವಹಿಸುವ ಯೋಗ್ಯ ಹಣಕಾಸು ಪ್ರಸ್ತಾವನೆಯನ್ನು ಸರ್ಕಾರ ಸ್ವೀಕರಿಸದೇ ಇರುವ ಕಾರಣಕ್ಕೆ ಹಾಗೂ ಸುರಕ್ಷತೆ, ಭದ್ರತೆಯ ದೃಷ್ಟಿಯಿಂದ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಒಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. 30 ವರ್ಷ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್‌ ನೌಕೆ, 2017ರಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಇದೇ ವೇಳೆ ಐತಿಹಾಸಿಕ ಐಎನ್‌ಎಸ್‌ ವಿರಾಟ್‌ ಭಾರತದ ರಾಜತಾಂತ್ರಿಕ ಸಂಸ್ಕೃತಿ ಹಾಗೂ ಭಾರತದ ಹೆಗ್ಗುರುತಾಗಿದ್ದು, ನೌಕೆಯನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಸಂಪನ್ಮೂಲ ಕ್ರೋಢೀಕರಿಸಬೇಕು ಎಂದು ರಾಜಂತಾಂತ್ರಿಕ ವ್ಯವಹಾರಗಳ ತಜ್ಞ (ನಿವೃತ್ತ ಯೋದ) ಸಿ. ಉದಯ್‌ ಭಾಸ್ಕರ್‌ ಹೇಳಿದ್ದಾರೆ. ಮಾಜಿ ನೌಕಾ ಮುಖ್ಯಸ್ಥ ಅರುಣ್‌ ಪ್ರಕಾಶ್‌ ಕೂಡ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನೌಕೆಯನ್ನು ಮ್ಯೂಸಿಯಂ ಮತ್ತು ಮನರಂಜನಾ ತಾಣವಾಗಿ ಅಭಿವೃದ್ಧಿಪಡಿಸಲು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಈ ಹಿಂದೆ ಕೋರಿಕೆ ಸಲ್ಲಿಸಿದ್ದವು.