ಇಸ್ಲಾಮಾಬಾದ್(ಜೂ.06): ನಿನ್ನೆಯಷ್ಟೇ ಭಾರತೀಯ ವಾಯುಸೇನೆ ಮತ್ತು ಪ್ರಧಾನಿ ಮೋದಿ ಅವರ ಕುರಿತು ವ್ಯಂಗ್ಯವಾಡಿದ್ದ ಪಾಕ್ ನಟಿ ವೀಣಾ ಮಲಿಕ್, ಇಂದು ಮತ್ತೆ ಟ್ವಿಟ್ಟರ್ ಮೂಲಕ ಭಾರತೀಯ ವಾಯುಪಡೆಯನ್ನು ಅವಮಾನಿಸಿದ್ದಾರೆ.

ನಾಪತ್ತೆಯಾಗಿರುವ ತನ್ನ ವಿಮಾನ ಪತ್ತೆ ಹಚ್ಚಲಿಕ್ಕಾಗದ ಭಾರತೀಯ ವಾಯುಸೇನೆ, ಬಾಲಾಕೋಟ್ ದಾಳಿಯಲ್ಲಿ ಎಷ್ಟು ಸೈನಿಕರು ಸತ್ತಿದ್ದಾರೆ ಎಂಬುದನ್ನು ಹೇಳುತ್ತದೆ ಎಂದು ಪಾಕ್ ನಟಿ ವೀಣಾ ಮಲಿಕ್ ಕಾಲೆಳೆದಿದ್ದಾರೆ.

ಐಎಎಫ್ ವಿಮಾನ ನಾಪತ್ತೆಯಾಗಿ ಮೂರು ದಿನ ಕಳೆದರೂ ಭಾರತೀಯ ವಾಯುಪಡೆಗೆ ಅದನ್ನು ಹುಡುಕಲಿಕ್ಕೆ ಆಗಿಲ್ಲ. ಆದರೆ ಬಾಲಾಕೋಟ್ ವಾಯುದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂದು ಕರಾರುವಕ್ಕಾಗಿ ಹೇಳುತ್ತದೆ ಎಂದು ವೀಣಾ ಮಲಿಕ್ ಕುಹುಕವಾಡಿದ್ದಾರೆ. 

13 ಸಿಬ್ಬಂದಿಯನ್ನು ಹೊತ್ತ ಐಎಎಫ್ ವಿಮಾನ ಅಸ್ಸಾಂ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿತ್ತು. ನಾಪತ್ತೆಯಾದ ವಿಮಾನ ಹುಡುಕಲು ಇಸ್ರೋ ಮತ್ತು ವಾಯುಸೇನೆ ಜಂಟಿಯಾಗಿ ಕಾರ್ಯಪ್ರವೃತ್ತವಾಗಿದೆ.