ಇಸ್ಲಾಮಾಬಾದ್(ಜೂ.05): ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆ ನಡುವೆ, ಪಾಕಿಸ್ತಾನ ರೆಡಾರ್ ಕಣ್ತಪ್ಪಿಸಿ ಬಾಲಾಕೋಟ್ ವಾಯುದಾಳಿ ನಡೆಸಲಾಯಿತು ಎಂಬ ಪ್ರಧಾನಿ ಮೋದಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

 ಭಾರೀ ಮಳೆಯ ಮಧ್ಯೆ ಯುದ್ಧ ವಿಮಾನಗಳು ರೆಡಾರ್ ಕಣ್ಣಿಗೆ ಕಾಣಿಸುವುದಿಲ್ಲವೇ ಎಂಬ ಚರ್ಚೆಗೆ ಪ್ರಧಾನಿ ಮೋದಿ ಹೇಳಿಕೆ ಇಂಬು ನೀಡಿತ್ತು.

ಅದರಂತೆ ಇತ್ತೀಚಿಗೆ ಅಸ್ಸಾಂನಲ್ಲಿ ಕಣ್ಮರೆಯಾದ ಭಾರತೀಯ ವಾಯುಸೇನೆಯ ವಿಮಾನದ ಕುರಿತು ಪಾಕಿಸ್ತಾನದ ನಟಿ ವೀಣಾ ಮಲಿಕ್ ಕುಹುಕವಾಡಿದ್ದಾರೆ.

ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆಯಿಂದಾಗಿ ಭಾರತೀಯ ವಾಯುಸೇನೆಯ ವಿಮಾನ ರೆಡಾರ್ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ವೀಣಾ ಮಲಿಕ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ವೀಣಾ ಮಲಿಕ್ ಮಾಡಿರುವ ಟ್ವೀಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಭಾರತೀಯ ಸಿನಿಮಾಗಳಲ್ಲಿ ನಟಿಸಿ ತನ್ನ ಹೊಟ್ಟೆ ತುಂಬಿಸಿಕೊಂಡ ನಟಿ ಮರಳಿ ಭಾರತಕ್ಕೆ ಅವಮಾನವಲ್ಲದೇ ಮತ್ತೇನು ನೀಡಿಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ.

ಪಾಕಿಸ್ತಾನದ ನಟಿ ವೀಣಾ ಮಲಿಕ್ ಭಾರತೀಯ ಸಿನಿಮಾಗಳಲ್ಲೂ ನಟಿಸಿದ್ದು, ಕನ್ನಡದ ‘ಡರ್ಟಿ ಪಿಕ್ಚರ್ಸ್ ಸಿಲ್ಕ್’ನಲ್ಲೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.