ಕಾಂಗ್ರೆಸಿನ ಮೈತ್ರಿ ನಿರ್ಧಾರವನ್ನು ಖಂಡಿಸಿ ಇದೀಗ ಈ ವ್ಯಕ್ತಿ ಕಾಂಗ್ರೆಸಿಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

ಹೈದರಾಬಾದ್‌: ಮೂರೂವರೆ ದಶಕಗಳಿಂದ ವಿರೋಧಿಸಿಕೊಂಡು ಬಂದಿದ್ದ ತೆಲುಗುದೇಶಂ ಪಕ್ಷ (ಟಿಡಿಪಿ)ದ ಜತೆ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ಸಿನ ನಿರ್ಧಾರ ಆಂಧ್ರಪ್ರದೇಶ ಘಟಕದಲ್ಲಿ ತಳಮಳಕ್ಕೆ ಕಾರಣವಾಗಿದೆ. ಕಾಂಗ್ರೆಸ್ಸಿನ ಈ ನಡೆ ಖಂಡಿಸಿ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ಚಿರಂಜೀವಿ ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Add Asianetnews Kannada as a Preferred SourcegooglePreferred

ತೆಲಂಗಾಣ ರೀತಿ ಆಂಧ್ರದಲ್ಲೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಬಹುದು ಎಂಬ ಅನುಮಾನದಿಂದ ಈಗಾಗಲೇ ನ.1ರಂದು ಇಬ್ಬರು ನಾಯಕರು ಕಾಂಗ್ರೆಸ್ಸಿಗೆ ವಿದಾಯ ಹೇಳಿದ್ದಾರೆ. ಇದೀಗ ಚಿರಂಜೀವಿ ಕೂಡ ಅದೇ ಹಾದಿಯಲ್ಲಿದ್ದಾರೆ. ಟಿಡಿಪಿ- ಕಾಂಗ್ರೆಸ್ಸಿನ ಮೈತ್ರಿ ಅನೈತಿಕವಾಗಿದೆ ಎಂಬ ಭಾವನೆ ಹೊಂದಿರುವ ಚಿರಂಜೀವಿ ಬೇಸರಗೊಂಡಿದ್ದಾರೆ. ರಾಜೀನಾಮೆ ಸಲ್ಲಿಸುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕುಟುಂಬದ ಮೂಲವೊಂದು ತಿಳಿಸಿದೆ.

ಮಾಜಿ ಸಚಿವ ವಟ್ಟಿವಸಂತ ಕುಮಾರ್‌ ಹಾಗೂ ಹಿರಿಯ ನಾಯಕ ಸಿ. ರಾಮಚಂದ್ರಯ್ಯ ಅವರು ಪಕ್ಷದ ನಿರ್ಧಾರ ವಿರೋಧಿಸಿ ನ.1ರಂದು ಕಾಂಗ್ರೆಸ್‌ ತೊರೆದಿದ್ದರು.