ನವದೆಹಲಿ[ಫೆ.05]: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ಮೊದಲ ಕಂತಿನ 2000 ರು. ಪಡೆಯಲು ಸಣ್ಣ ಮತ್ತು ಅತಿ ಸಣ್ಣ ರೈತರು ಆಧಾರ್‌ ನೀಡುವುದು ಕಡ್ಡಾಯವೇನಲ್ಲ. ಅದೊಂದು ಆಯ್ಕೆ ಅಷ್ಟೇ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಆದರೆ, ಮುಂದಿನ ಕಂತುಗಳನ್ನು ಪಡೆಯಲು ರೈತರು ಆಧಾರ್‌ ನೀಡುವುದು ಕಡ್ಡಾಯವಾಗಿದೆ.

ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಅವರು 12 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6000 ರು. ಸಾಯಯಧನ ನೀಡುವ ಯೋಜನೆ ಘೋಷಿಸಿದ್ದರು. ಈ ಯೋಜನೆ ಈ ವರ್ಷದಿಂದಲೇ ಜಾರಿ ಆಗಲಿದ್ದು, ಮೊದಲ ಕಂತು ಮಾಚ್‌ರ್‍ನಲ್ಲಿ ಬಿಡುಗಡೆ ಆಗಲಿದೆ. ಸಾಧ್ಯವಾದ ಕಡೆಯಲ್ಲಿ ಮಾತ್ರ ರೈತರಿಂದ ಆಧಾರ್‌ ನಂಬರ್‌ ಸಂಗ್ರಹಿಸಬೇಕು ಎಂದು ಕೃಷಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ನಕಲಿ ಫಲಾನುಭವಿಗಳ ಸೃಷ್ಟಿಆಗದಂತೆ ಖಚಿತಪಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವ ಸಚಿವಾಲಯ, ಒಂದು ವೇಳೆ ಆದಾರ್‌ ನಂಬರ್‌ ಇಲ್ಲದೇ ಇದ್ದರೆ, ಇತರ ದಾಖಲೆಗಳಾದ ವಾಹನ ಪರವಾನಗಿ, ವೋಟರ್‌ ಐಡಿ, ನರೇಗಾ ಉದ್ಯೋಗ ಕಾರ್ಡ್‌ ಮತ್ತಿತರ ದಾಖಲೆಗಳನ್ನು ಒದಗಿಸಿ ಫಲಾನುಭವ ಪಡೆದುಕೊಳ್ಳಬಹುದು. ಉಳಿದ ಕಂತುಗಳನ್ನು ಪಡೆಯಲು ಆಧಾರ್‌ ಕಡ್ಡಾಯವಾಗಿದೆ ಎಂದು ತಿಳಿಸಿದೆ.