ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಸೃಷ್ಟಿಯಾದ 'ಡಾಲ್ಫಿನ್' ಸೂಪರ್ ಟೈಫೂನ್ ಜಪಾನ್, ಚೀನಾ ಮತ್ತು ತೈವಾನ್‌ಗಳಲ್ಲಿ ತೀವ್ರ ಹಾನಿ ಉಂಟುಮಾಡುತ್ತಿದೆ. ಈ ಚಂಡಮಾರುತದ ಅಬ್ಬರಕ್ಕೆ ಜಪಾನ್‌ನಲ್ಲಿ ಐವರು ಮೃತಪಟ್ಟಿದ್ದು, ಚೀನಾದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.

ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಸೂಪರ್ ಟೈಫೂನ್ ಡಾಲ್ಫಿನ್ ತನ್ನ ರೌದ್ರನರ್ತನವನ್ನು ತೋರಿಸುತ್ತಿದೆ. ಡಾಲ್ಫಿನ್ ಅಬ್ಬರಕ್ಕೆ ಜಪಾನ್, ಚೀನಾ ಹಾಗೂ ತೈವಾನ್ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಟೈಫೂನ್ ಬಲವಾದ ಗಾಳಿಯೊಂದಿಗೆ ಸಮುದ್ರ ಅಲೆಗಳನ್ನು ಕಡಲ ತೀರಕ್ಕೆ ತಂದು ಅಪ್ಪಳಿಸುತ್ತಿದ್ದು, ಲಕ್ಷಾಂತರ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ.

ಈಗಾಗಲೇ ಜಪಾನ್‌ನ ದಕ್ಷಿಣ ಓಕಿನಾವಾ ಪ್ರದೇಶದಲ್ಲಿ ಟೈಫೂನ್ ಅಬ್ಬರ ಕಂಡು ಬಂದಿದ್ದು, ಸುಮಾರು 14 ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದುವರೆಗೂ ಐವರು ಜೀವನ ಕಳೆದುಕೊಂಡಿದ್ದಾರೆ.

ಶಾಲೆಗಳಿಗೆ ರಜೆ ಘೋಷಣೆ

ಹವಾಮಾನ ಇಲಾಖೆಯ ವರದಿ ಅನ್ವಯ, ಚಂಡಮಾರುತವೂ ಗಂಟೆಗೆ ಸುಮಾರು 216 ಕಿಲೋ ಮಿಟರ್ ವೇಗದಲ್ಲಿ ಬೀಸುತ್ತಿದ್ದು, ಈಗ ಚೀನಾದ ಪೂರ್ವ ಕರಾವಳಿಯತ್ತ ಸಾಗುತ್ತಿದೆ. ಇದರೊಂದಿಗೆ ಚೀನಾ ಬಂದರುಗಳನ್ನು ಮುಚ್ಚಲಾಗಿದ್ದು, ವಿಮಾನ ಹಾರಾಟ ರದ್ದು ಪಡಿಸಲಾಗಿದೆ. ಚಂಡಮಾರುತ ಪ್ರಭಾವ ಉಂಟು ಮಾಡಲಿರುವ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಂಘೈ ಒಂದರಲ್ಲಿಯೇ ಸುಮಾರು 1300 ವಿಮಾನ ಹಾರಾಟಗಳನ್ನು ರದ್ದು ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೀನಾ ಸರ್ಕಾರ 3 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಮುಂದಾಗಿದೆ.

ಝೆಜಿಯಾಂಗ್‌ನಲ್ಲಿ ಸಮಾರು 162 ಹಡಗುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಜಪಾನ್ ಮತ್ತು ತೈವಾನ್ ವಿಮಾನ ನಿಲ್ದಾಣಗಳಲ್ಲಿಯೂ ಕಾರ್ಯಾಚರಣೆರನ್ನು ರದ್ದು ಮಾಡಲಾಗಿದೆ. ಪೂರ್ವ ಝೆಜಿಯಾಂಗ್ ಪ್ರದೇಶದಲ್ಲಿ 600 ಮೀ.ಮೀ ಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಹಾಗೂ ಭೂಕುಸಿತದ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.

ಭಾರತದ ಮೇಲೆ ಚಂಡಮಾರುತದ ನೇರ ಪ್ರಭಾವ ಇಲ್ಲ

ಈ ವರ್ಷ ಚೀನಾಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಡಾಲ್ಫಿನ್ ಆಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಗಂಟೆಗೆ 162 ಕಿಲೋ ಮೀಟರ್ ವೇಗದಲ್ಲಿ ಕಡಲ ತೀರಕ್ಕೆ ಅಪ್ಪಳಿಸಿದ ಬಳಿಕ, ಚಂಡಮಾರುತದ ವೇಗ ಕಡಿಮೆಯಾಗಲಿದೆ ಎಂದು ಚೀನಾ ಹವಾಮಾನ ಇಲಾಖೆ ತಿಳಿಸಿದೆ.

ಭಾರತದ ಮೇಲೆ ಡಾಲ್ಫಿನ್ ಚಂಡಮಾರುತದ ನೇರ ಪ್ರಭಾವ ಇಲ್ಲದಿದ್ದರೂ ಕೂಡ, ಪರೋಕ್ಷವಾಗಿ ಭಾರತದ ಮಾನ್ಸೂನ್ ಮಾರುತಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ. ಹವಾಮಾನ ತಜ್ಞರು ಅನ್ವಯ, ಪ್ರಬಲ ಚಂಡಮಾರುತ ಪಶ್ಚಿಮ ಪೆಸಿಫಿಕ್‌ನಿಂದ ಹೆಚ್ಚಿನ ಶಾಖ ಮತ್ತು ತೇವಾಂಶವನ್ನು ಸೆಳೆದುಕೊಳ್ಳುತ್ತದೆ. ಭಾರತದಲ್ಲಿ ಮಳೆ ಸುರಿಸುವ ಮಾರುತಗಳ ಪ್ರಭಾವ ಬೀರಿ, ಮಳೆ ದುರ್ಬಲಗೊಳ್ಳಲು ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಲು ಕಾರಣವಾಗಬಹುದು ಎಂದು ಅಂದಾಜು ಮಾಡಿದ್ದಾರೆ. ಆದರೆ ಇದು ಭಾರತದಲ್ಲಿ ಮಾನ್ಸೂನ್ ಅಂತ್ಯಗೊಳ್ಳಲು ಕಾರಣ ಆಗೋದಿಲ್ಲ, ಕೆಲವು ದಿನಗಳ ವರೆಗೂ ಮಳೆಯ ಪ್ರಮಾಣ ಕಡಿಮೆ ಮಾಡಬಹುದು. ಡಾಲ್ಫಿನ್ ಚಂಡಮಾರುತ ದುರ್ಬಲಗೊಂಡ ಬಳಿಕ ಮತ್ತೆ ಮಾನ್ಸೂನ್ ಮಳೆಯ ಚಟುವಟಿಕೆಗಳು ಹೆಚ್ಚಾಗಬಹುದು ಎಂದು ವಿವರಿಸಿದ್ದಾರೆ.