ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ರೋಹ್ಟಕ್ ಜಿಲ್ಲೆಯ ಸೋನೇರಿಯಾ ಗಾಂವ್ ಮತ್ತು ಶಹಾಪುರ ಬೇಘು ಎಂಬ ಎರಡು ಗ್ರಾಮಗಳು. ಗುರ್ಮೀತ್ ಬಾಬಾರನ್ನು ಇರಿಸಲಾಗಿರುವ ಜೈಲು ಸೋನೇರಿಯಾ ಗಾಂವ್ ಎಂಬ ಗ್ರಾಮದಲ್ಲಿದೆ. ಆದರೆ, ಈ ಊರಿನ ಗ್ರಾಮಸ್ಥರಿಗೆ ಈ ಬಾಬಾ ಯಾರೆಂಬುದೇ ಗೊತ್ತಿಲ್ಲ. ಆದರೆ, ಬಾಬಾ ಬೆಂಬಲಿಗರು ಮಾಡಿದ ಹಿಂಸಾಚಾರಗಳನ್ನು ಕಂಡು ಕೆರಳಿ ಕೆಂಡವಾಗಿದ್ದಾರೆ.
ರೋಹ್ಟಕ್(ಆ. 28): ಕಳೆದ ಶುಕ್ರವಾರದಂದು ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅತ್ಯಾಚಾರ ಅಪರಾಧಿ ಎಂದು ಸಿಬಿಐ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಅನಿರೀಕ್ಷಿತ ರೀತಿಯಲ್ಲಿ ಗಲಭೆಗಳಾಗಿ 30ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಡೇರಾ ಸಚ್ಚಾ ಸೌಧಾದ ಭಕ್ತರು ಮತ್ತು ಬಾಬಾ ಬೆಂಬಲಿಗರು ಅಟ್ಟಹಾಸ ಮೆರೆದಿದ್ದರು. ಪೊಲೀಸರು ಮತ್ತು ಅರೆಸೇನಾ ಪಡೆಗಳು ಬಹುತೇಕ ಮೂಕ ಪ್ರೇಕ್ಷಕರಾಗಿದ್ದರು. ಈಗ ಪ್ರಕರಣದಲ್ಲಿ ಬಾಬಾ ಅವರಿಗೆ ಶಿಕ್ಷೆಯ ಪ್ರಮಾಣ ಘೋಷಿಸುವ ಹಿನ್ನೆಲೆಯಲ್ಲಿ ಬಾಬಾ ಭಕ್ತರು ಇನ್ನೊಂದು ಗಲಭೆ ಸೃಷ್ಟಿಗೆ ಸಜ್ಜಾಗಿದ್ದಾರೆಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಸರಕಾರ ಕೂಡ ಜಾಗೃತಗೊಂಡಂತಿದೆ. ಸಾವಿರಾರು ಪೊಲೀಸರು ರೋಹ್ಟಕ್'ನಲ್ಲಿ ಭದ್ರಕೋಟೆಯನ್ನೇ ನಿರ್ಮಿಸಿವೆ. ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ರಾಜ್ಯಗಳ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಆದರೆ, ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ರೋಹ್ಟಕ್ ಜಿಲ್ಲೆಯ ಸೋನೇರಿಯಾ ಗಾಂವ್ ಮತ್ತು ಶಹಾಪುರ ಬೇಘು ಎಂಬ ಎರಡು ಗ್ರಾಮಗಳು. ಗುರ್ಮೀತ್ ಬಾಬಾರನ್ನು ಇರಿಸಲಾಗಿರುವ ಜೈಲು ಸೋನೇರಿಯಾ ಗಾಂವ್ ಎಂಬ ಗ್ರಾಮದಲ್ಲಿದೆ. ಆದರೆ, ಈ ಊರಿನ ಗ್ರಾಮಸ್ಥರಿಗೆ ಈ ಬಾಬಾ ಯಾರೆಂಬುದೇ ಗೊತ್ತಿಲ್ಲ. ಆದರೆ, ಬಾಬಾ ಬೆಂಬಲಿಗರು ಮಾಡಿದ ಹಿಂಸಾಚಾರಗಳನ್ನು ಕಂಡು ಕೆರಳಿ ಕೆಂಡವಾಗಿದ್ದಾರೆ. "ಡೇರಾ ಬೆಂಬಲಿಗರಿಗೆ ಎದುರಾಗಿ ನಮ್ಮ ಗ್ರಾಮವು ಗೋಡೆಯಂತೆ ನಿಲ್ಲುತ್ತದೆ. ಆಡಳಿತವು ವಿಫಲವಾದರೂ ನಾವಂತೂ ಡೇರಾ ಬೆಂಬಲಿಗರನ್ನು ಸಮೀಪಕ್ಕೂ ಬರಲು ಬಿಡುವುದಿಲ್ಲ..." ಎಂದು ಸೋನೇರಿಯಾ ಗಾಂವ್ ಊರಿನ ಮುಖ್ಯಸ್ಥ ಪ್ರಕಾಶ್ ಬುಧ್ವರ್ ಹೇಳುತ್ತಾರೆ.
ಇನ್ನು, ಡೇರಾ ಸಚ್ಚಾ ಸೌಧಾದ ಮುಖ್ಯ ಕಚೇರಿ ಇರುವ ಸ್ಥಳಕ್ಕೆ ಸಮೀಪದಲ್ಲೇ ಇರುವುದು ಶಾಹಪುರ್ ಬೇಗು ಎಂಬ ಗ್ರಾಮ. ಮುಳ್ಳಿಗೆ ಮುಳಂತೆ, ಈ ಊರಿನ ಜನರಂತೂ ಬಾಬಾ ಬೆಂಬಲಿಗರಿಗೆ ಪಾಠ ಕಲಿಸಲು ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದ್ದಾರೆ. ಕಲ್ಲುಗಳು, ದೊಣ್ಣೆ, ಇಟ್ಟಿಗೆ, ಕಬ್ಬಿಣದ ರಾಡು ಇತ್ಯಾದಿ ವಸ್ತುಗಳನ್ನು ಗ್ರಾಮದಲ್ಲಿ ಒಟ್ಟಿಗೆ ಸೇರಿಸಿ ಇಟ್ಟುಕೊಂಡಿದ್ದಾರೆ. ಆ. 25ರಂದು ರಾಮ್ ರಹೀಮ್ ಬೆಂಬಲಿಗರು ಇವೇ ಕಲ್ಲು, ದೊಣ್ಣೆ, ಐರನ್ ರಾಡ್'ಗಳಿಂದ ಹಿಂಸಾಚಾರ ಸೃಷ್ಟಿಸಿದ್ದರು. ಇದೀಗ ಆ ದುಷ್ಕರ್ಮಿಗಳಿಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸಲು ಈ ಗ್ರಾಮಸ್ಥರು ನಿರ್ಧರಿಸಿದ್ದಾರೆ.
