ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಲಾಗಿದೆ. ಆಕೆ ನರಳಾಡುತ್ತಾ, ಸಹಾಯಕ್ಕೆ ಅಂಗಲಾಚುತ್ತಾ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತಿದ್ದಾಳೆ. ಇಂತಹ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಇದು ಭಾರೀ ವೈರಲ್ ಆಗಿದ್ದು, ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದೊಂದಿಗೆ ಬರೆಯಲಾಗಿದೆ. ಅಲ್ಲದೆ ಈಕೆ ಹಿಂದು ಹುಡುಗಿಯಾಗಿದ್ದು, ಕ್ರೈಸ್ತರ ಚರ್ಚ್‌ನಲ್ಲಿ ಪ್ರಾರ್ಥನೆಗೆ ತೆರಳಿದ್ದಕ್ಕೆ ಕೋಪಗೊಂಡ ಗುಂಪೊಂದು ಈಕೆಯನ್ನು ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದಿದೆ ಎಂದು ವಿವರ ನೀಡಲಾಗಿದೆ.

ಈ ವಿಡಿಯೋ 2016 ರಲ್ಲಿ ಒಮ್ಮೆ, 2018 ರಲ್ಲಿ ಮತ್ತೊಮ್ಮೆ, 2019 ರಲ್ಲಿ ಮೊಗದೊಮ್ಮೆ ವೈರಲ್ ಆಗಿದೆ. ಈ ಸಂಬಂಧ ಸತ್ಯಾಸತ್ಯ ತಿಳಿಯಲು ವಿಡಿಯೋ ರಿವರ್ಸ್‌ನಲ್ಲಿ ಚೆಕ್ ಮಾಡಿದಾಗ ಸತ್ಯ ಬಯಲಾಗಿದೆ. ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ ಎಂಬುದೂ ಖಚಿತವಾಗಿದೆ.

ಹೀಗೆ ಯುವತಿಯೊಬ್ಬಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಘಟನೆ ನಡೆದಿರುವುದು ಗ್ವಾಟೆಮಾಲಾ ದೇಶದ ರಿಯೋ ಬ್ರಾವೋದಲ್ಲಿ. 2015 ರಲ್ಲಿ 16  ವರ್ಷದ ಬಾಲಕಿಯನ್ನು ಥಳಿಸಿ, ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಟ್ಯಾಕ್ಸಿ ಡ್ರೈವರ್ ಒಬ್ಬನ ಕೊಲೆ ಆರೋಪದಲ್ಲಿ ಗುಂಪೊಂದು ಈ ಕೃತ್ಯ ನಡೆಸಿತ್ತು. ಈ ವಿಡಿಯೋವನ್ನು ಪಾಕಿಸ್ತಾನದ ಸಾಮಾಜಿಕ ತಾಣದ ಬಳಕೆದಾರರು ದುರುದ್ದೇಶದಿಂದ ಭಾರತದ ಹೆಸರು ಹಾಕಿ ವೈರಲ್ ಮಾಡಿದ್ದರು.

ಭಾರತದ ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ. ಆದ್ದರಿಂದ ಮಧ್ಯಪ್ರದೇಶದಲ್ಲಿ ಹಿಂದೂ ಹುಡುಗಿ ಚರ್ಚ್‌ನಲ್ಲಿ ಪ್ರಾರ್ಥನೆಗೆ ಹೋಗಿದ್ದಕ್ಕೆ ಬೆಂಕಿ ಹಚ್ಚಿ ಕೊಲ್ಲಲಾಗಿದೆ ಎನ್ನುವುದು ಸುಳ್ಳು ಖಚಿತವಾಗಿದೆ. 

- ವೈರಲ್ ಚೆಕ್