ವಿಮಾ ಕಂಪನಿಗಳ ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ವಿರೋಧ ಸೇರಿದಂತೆ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಅನಿರ್ಧಿಷ್ಟಾವದಿ ಮುಷ್ಕರ ಆರಂಭಿಸಿದ್ದಾರೆ.
ಬೆಂಗಳೂರು(ಮಾ.31): ವಿಮಾ ಕಂಪನಿಗಳ ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ವಿರೋಧ ಸೇರಿದಂತೆ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಅನಿರ್ಧಿಷ್ಟಾವದಿ ಮುಷ್ಕರ ಆರಂಭಿಸಿದ್ದಾರೆ.
ರಾಜ್ಯ ಸೇರಿದಂತೆ ದಕ್ಷಿಣ ಭಾರತದೆಲ್ಲೆಡೆ ಅನಿರ್ಧಿಷ್ಟಾವಧಿ ಲಾರಿ, ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳ ಮುಷ್ಕರಕ್ಕೆ ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದೆ. ಇದರಿಂದಾಗಿ ಲಕ್ಷಾಂತರ ಲಾರಿಗಳ ಓಡಾಟ ಸ್ಥಗಿತವಾಗಿದೆ. ಡಿಸೇಲ್, ಪೆಟ್ರೋಲ್, ಗ್ಯಾಸ್ ಹಾಗೂ ತರಕಾರಿ ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಇದೇ ಮಾರ್ಚ್ 11ರಂದು ನಡೆದ ಸಂಘಟನೆಯ 19ನೇ ಕಾರ್ಯಕಾರಣಿ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಮುಷ್ಕರ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಪಾಂಡಿಚೇರಿ ಲಾರಿ ಮಾಲೀಕರ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ವಾಹನ ವಿಮಾ ಸಂಸ್ಥೆಗಳು ಥರ್ಡ್ ಪಾರ್ಟಿ ಪ್ರೀಮಿಯಂ ಮೊತ್ತವನ್ನು ಶೇ. 50ರಿಂದ 68ರಷ್ಟು ಹೆಚ್ಚಳ ಮಾಡಿವೆ. ಏ. 1ರಿಂದ ನೂತನ ವಿಮಾ ಶುಲ್ಕ ಜಾರಿಗೆ ಬರಲಿದೆ. ಇದರಿಂದಾಗಿ, ಲಾರಿ, ಬಸ್, ಮ್ಯಾಕ್ಸಿ, ಕ್ಯಾಬ್ ಸೇರಿ ಇನ್ನಿತರ ವಾಣಿಜ್ಯ ವಾಹನಗಳ ಮಾಲೀಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ.
ಹೀಗಾಗಿ ವಿಮಾ ಮೊತ್ತ ಹೆಚ್ಚಳದ ನಿರ್ಧಾರವನ್ನು ಕೈಬಿಡಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಷ್ಕರದ ಅವಧಿಯಲ್ಲಿ ದಕ್ಷಿಣ ಭಾರತಕ್ಕೆ ಬೇರೆ ರಾಜ್ಯಗಳಿಂದಲೂ ಲಾರಿಗಳು ಪ್ರವೇಶಿಸುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.
ಲಾರಿ ಮುಷ್ಕರದಿಂದ ಹೊರ ರಾಜ್ಯಗಳಿಂದ ಯಾವುದೇ ಅಗತ್ಯ ವಸ್ತುಗಳು ರಾಜ್ಯಕ್ಕೆ ಪ್ರವೇಶ ಮಾಡದಿರುವುದರಿಂದ ಬೆಲೆಯಲ್ಲಿ ಒಂದಿಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ.
ಲಾರಿಮಾಲೀಕರಸಂಘದಬೇಡಿಕೆಗಳೇನು?
-ಇನ್ಶೂರೆನ್ಸ್ ಕಂಪನಿಗಳ ಥರ್ಡ್ ಪಾರ್ಟಿ ಪ್ರೀಮಿಯಂ ಏರಿಕೆಗೆ ವಿರೋಧ
-15 ವರ್ಷದ ಹಳೆಯ ವಾಹನಗಳ ತಡೆಗೆ ಬ್ರೇಕ್ ನೀಡಬೇಕು
-ಸರಕು ಸಾಗಾಣಿಕೆ ವಾಹನಗಳಲ್ಲಿ ಎಸಿ ಅಳವಡಿಕೆಗೆ ವಿರೋಧ
-ಪ್ರವಾಸಿ ವಾಹನಗಳಿಗೆ ನ್ಯಾಷನಲ್ ಪರವಾನಿಗೆ ನೀಡುವುದು
-ಸಮರ್ಪಕ ಮರಳು ನೀತಿ ಜಾರಿಯಾಗಬೇಕು
-ಸಾರಿಗೆ ಶುಲ್ಕ ಹೆಚ್ಚಳಕ್ಕೆ ವಿರೋಧ
ಲಾರಿ ಮುಷ್ಕರ ಈಗಾಲೇ ನಗರದ ಕೆಆರ್ ಮಾರ್ಕೆಟ್, ಯಶವಂತಪುರ ಎಪಿಎಂಸಿ ಅಂಗಡಿ ಮೇಲೆ ನೇರ ಪರಿಣಾಮ ಬೀರಿದೆ.
