ಎರಡು ವಿಫಲ ಮದುವೆಗಳ ನಂತರ ಸಹೋದ್ಯೋಗಿಯನ್ನು ಪ್ರೀತಿಸಿ ಮದುವೆಯಾದ ಮಹಿಳೆಗೆ ಮೂರನೇ ದಾಂಪತ್ಯದಲ್ಲೂ ನಿರಾಸೆಯಾಗಿದೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಪತಿಯ ವಿಚಿತ್ರ ವರ್ತನೆ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತು, ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಆಕೆ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದ ಮಹಿಳೆ. ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಮದುವೆಗಳು ಮುರಿದುಬಿದ್ದಿದ್ದು, ಇಬ್ಬರು ಪತಿಗಳು ಆಕೆಯನ್ನು ತೊರೆದಿದ್ದರು. ಈ ನೋವಿನ ನಡುವೆಯೇ, ಆಕೆಯ ಜೀವನದಲ್ಲಿ ಹೊಸ ಆಶಾಕಿರಣವಾಗಿ ಕಾಣಿಸಿಕೊಂಡವರುಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ.
ಇಬ್ಬರೂ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಎಚ್‌ಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಡುವೆ ಬೆಳೆದ ಸ್ನೇಹ ಪ್ರೀತಿಗೆ ತಿರುಗಿ, ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ.
ಮಹಿಳೆಯ ಆರೋಪದ ಪ್ರಕಾರ, ಮೂರನೇ ಪತಿಯಾಗಿ ಜೀವನಕ್ಕೆ ಬಂದ ವ್ಯಕ್ತಿಯೂ ಸಹ ವಿಚಿತ್ರ ವರ್ತನೆ ತೋರಲು ಆರಂಭಿಸಿದ್ದಾನೆ. ಆತನ ನಡೆನುಡಿಗಳು ಆಕೆಗೆ ಮಾನಸಿಕ ಕಿರಿಕಿರಿ ಹಾಗೂ ಮುಜುಗರ ಉಂಟುಮಾಡಿದ್ದವು ಎನ್ನಲಾಗಿದೆ. ಈ ಕಿರುಕುಳವನ್ನು ಸಹಿಸಲಾಗದೇ, ಮದುವೆಯಾದ ನಾಲ್ಕು ತಿಂಗಳಲ್ಲೇ ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಇದೀಗ ಪತಿ–ಪತ್ನಿ ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ಪ್ರಕರಣ ಕಾನೂನು ಹಂತಕ್ಕೆ ತಲುಪಿದೆ. ಈ ವಿವಾದದಲ್ಲಿ ಯಾರು ತಪ್ಪು, ಯಾರು ಸರಿ ಎನ್ನುವುದನ್ನು ಈಗಲೇ ನಿರ್ಧರಿಸುವುದು ಕಷ್ಟಸಾಧ್ಯವಾಗಿದೆ. ಕಾರಣ, ಇಬ್ಬರ ಆರೋಪಗಳಿಗೂ ಉತ್ತರಗಳು ಅವರವರಲ್ಲಿಯೇ ಅಡಗಿವೆ. ಈ ಪ್ರಕರಣದಲ್ಲಿ ಸತ್ಯ ಯಾವುದು ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕಿದೆ.


