Asianet Suvarna News Asianet Suvarna News

ಎಐಎಡಿಎಂಕೆ ಬಣ ವಿಲೀನಕ್ಕೆ ಸಿದ್ಧವೆಂದ ಸೆಲ್ವಂ: ಆದ್ರೆ ಈ ಕಂಡೀಷನ್'ಗೆ ಒಪ್ತಾರಾ ಪಳನಿಸ್ವಾಮಿ?

ಬಹುದಿನಗಳಿಂದ ಚರ್ಚೆಯಲ್ಲಿದ್ದ ತಮಿಳುನಾಡಿನ ಅಣ್ಣಾಡಿಎಂಕೆಯ ಎರಡು ಬಣಗಳು ಒಂದಾಗುವ ಕಾಲ ಸನ್ನಿಹಿತವಾಗುವ ಸ್ಪಷ್ಟ ಸುಳಿವು ಹೊರಬಿದ್ದಿದೆ.

TN CM Edappadi Palanisamy sacks TTV Dinakaran from AIADMK

ಚೆನ್ನೈ(ಆ.11): ಬಹುದಿನಗಳಿಂದ ಚರ್ಚೆಯಲ್ಲಿದ್ದ ತಮಿಳುನಾಡಿನ ಅಣ್ಣಾಡಿಎಂಕೆಯ ಎರಡು ಬಣಗಳು ಒಂದಾಗುವ ಕಾಲ ಸನ್ನಿಹಿತವಾಗುವ ಸ್ಪಷ್ಟ ಸುಳಿವು ಹೊರಬಿದ್ದಿದೆ.

ಶಶಿಕಲಾ ನಟರಾಜನ್ ಹಾಗೂ ಅವರ ಬಂಧುಗಳನ್ನು ಪಕ್ಷದಿಂದ ಉಚ್ಚಾಟಿಸಿ, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತು ತನಿಖೆಗೆ ಆದೇಶಿಸಿದರೆ ವಿಲೀನಕ್ಕೆ ಸಿದ್ಧವಿರುವುದಾಗಿ ಪನ್ನೀರ್‌ಸೆಲ್ವಂ ಬಣ ಇಟ್ಟಿರುವ ಷರತ್ತಿಗೆ ಪೂರಕವೆಂಬಂತೆ, ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ವಿರುದ್ಧ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಬಹಿರಂಗ ಬಂಡಾಯ ಸಾರಿದ್ದಾರೆ.

ಚೆನ್ನೈನಲ್ಲಿ ಗುರುವಾರ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಅಣ್ಣಾಡಿಎಂಕೆ (ಅಮ್ಮಾ) ಬಣ, ದಿನಕರನ್ ಅವರನ್ನು ಉಪಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು ಪಕ್ಷದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದೆ. ಪಳನಿಸ್ವಾಮಿ ಅವರು ನೇರವಾಗಿ ದಿನಕರನ್ ಅವರ ಅಧಿಕಾರವನ್ನೇ ಪ್ರಶ್ನಿಸಿದ್ದಾರೆ. ಈ ಮೂಲಕ ದಿನಕರನ್ ಅವರನ್ನು ನೇಮಿಸಿದ್ದ, ಸದ್ಯ ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಿನಲ್ಲಿರುವ ಪಕ್ಷದ ಪ್ರದಾನ ಕಾರ್ಯದರ್ಶಿ ಶಶಿಕಲಾ ಅವರ ನಿರ್ಧಾರವನ್ನೇ ಪ್ರಶ್ನಿಸಿದ್ದಾರೆ.

ದಿನಕರನ್ ವಿರುದ್ಧ ಈ ರೀತಿ ಪಳನಿಸ್ವಾಮಿ ಬಂಡೇಳುತ್ತಿರುವುದು ಇದೇ ಮೊದಲು. ಹೀಗಾಗಿ ಅವರ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪಳನಿಸ್ವಾಮಿ ಬಣದ ಈ ನಿಲುವು ಪನ್ನೀರ್‌ ಸೆಲ್ವಂ ನೇತೃತ್ವದ ಪುರಚಿ ತಲೈವಿ ಅಮ್ಮಾ ಬಣದೊಂದಿಗೆ ವಿಲೀನಗೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗಿದೆ. ಆ.15ರೊಳಗೇ ಎರಡೂ ಬಣಗಳೂ ವಿಲೀನಗೊಳ್ಳಬಹುದು ಎಂದು ಪಳನಿಸ್ವಾಮಿ ಬಣ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಪಳನಿಸ್ವಾಮಿ ಬಣ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜನರ ಆಶಯದಂತಿದೆ ಎನ್ನುವ ಮೂಲಕ ವಿಲೀನದ ಸುಳಿವನ್ನು ಪನ್ನೀರ್‌ಸೆಲ್ವಂ ಬಣ ನೀಡಿದೆ.

ತಮ್ಮ ವಿರುದ್ಧ ಪಳನಿಸ್ವಾಮಿ ಬಂಡಾಯದ ವಿರುದ್ಧ ಕಿಡಿಕಾರಿರುವ ದಿನಕರನ್, ‘ಸರ್ಜಿಕಲ್ ಕ್ರಮ’ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ. ಇದು ವಿಶ್ವಾಸಘಾತುಕ ಕ್ರಮವಾಗಿದೆ ಎಂದು ದಿನಕನರ್ ಬೆಂಬಲಿಗರು ಪಳನಿಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

Follow Us:
Download App:
  • android
  • ios