ನವದೆಹಲಿ[ಸೆ.21]: ಜು.29ರಂದು ಪ್ರಕಟವಾದ ರಾಷ್ಟ್ರೀಯ ಹುಲಿ ಗಣತಿಯಲ್ಲಿ ಭಾರೀ ಲೋಪದೋಷ ಆಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. 2015ರಲ್ಲಿ ಇದ್ದ 2,226 ಹುಲಿಗಳಿಗೆ ಹೋಲಿಸಿದರೆ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು, ದೇಶದೆಲ್ಲೆಡೆ ಒಟ್ಟು 2,967 ಹುಲಿಗಳಿವೆ ಎಂದು ಅಂದಾಜಿಸಿದ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಹುಲಿ ಗಣತಿಯ ಮಾನದಂಡಗಳನ್ನು ಸರಿಯಾಗಿ ಪಾಲಿಸಿದ್ದರೆ ಸುಮಾರು 221 ಹುಲಿಗಳು ಕಡಿಮೆಯಾಗುತ್ತಿದ್ದವು ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ.

ರಾಜ್ಯದಲ್ಲಿ 524 ಹುಲಿ: ಎರಡನೇ ಸ್ಥಾನಕ್ಕೆ ಕುಸಿದ ಕರ್ನಾಟಕ, ಮ. ಪ್ರದೇಶ ಪ್ರಥಮ!

ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳು ಜಂಟಿಯಾಗಿ 2018ರಲ್ಲಿ ಭಾರತದಲ್ಲಿ ಇರುವ ಹುಲಿಗಳ ಗಣತಿ ಕೈಗೊಂಡಿತ್ತು. ಗಣತಿಯಲ್ಲಿ ದಾಖಲಾದ 2,967 ಹುಲಿಗಳ ಪೈಕಿ 2,462 ಹುಲಿಗಳ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ವನ್ಯಜೀವಿಗಳ ಗಣತಿಗೆ ಅನುಸರಿಸುವ ಮಾನದಂಡಗಳನ್ನು ಪಾಲಿಸಿದರೆ 221 ಪೋಟೋಗಳನ್ನು ಗಣತಿಗೆ ಪರಿಗಣಿಸಬಾರದು. ಹೀಗಾಗಿ ಏಳರಲ್ಲಿ ಒಂದು ಹುಲಿ ಕೇವಲ ಕಾಗದದಲ್ಲಿ ಅಷ್ಟೇ ಉಳಿದುಕೊಂಡಿದೆ ಎಂದು ವರದಿ ತಿಳಿಸಿದೆ.

ನಂ.1 ಹುಲಿ ರಾಜ್ಯ ಮಧ್ಯಪ್ರ​ದೇ​ಶದಲ್ಲಿ ಒಂದೇ ವಾರದಲ್ಲಿ 3 ಹುಲಿ ಸಾವು!

ನ್ಯೂನತೆಗಳು ಏನೇನು?

ನಕಲು ಚಿತ್ರಗಳು:

ಸೆರೆ ಹಿಡಿಯಲಾದ ಹುಲಿಯ ಫೋಟೋಗಳ ಪೈಕಿ ಸುಮಾರು 51 ಫೋಟೋಗಳು ನಕಲು ಚಿತ್ರಗಳು ಅಥವಾ ಒಂದೇ ಹುಲಿಯ ಇನ್ನೊಂದು ಚಿತ್ರವನ್ನು ಲೆಕ್ಕಹಾಕಲಾಗಿದೆ.

ಮರಿಗಳ ಎಣಿಕೆ:

ಮರಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಸಾಮಾನ್ಯವಾಗಿ 12ರಿಂದ 18 ತಿಂಗಳ ಒಳಗಿನ ಹುಲಿ ಮರಿಗಳನ್ನು ಗಣತಿಗೆ ಪರಿಗಣಿಸುವುದಿಲ್ಲ. ಆದರೆ, ಚಿಕ್ಕ ಚಿಕ್ಕ ಮರಿಗಳನ್ನು ಸಹ ಗಣತಿಗೆ ಪರಿಗಣಿಸಲಾಗಿದೆ. ಒಂದು ವರ್ಷದ ಒಳಗಿನ ಸುಮಾರು 46 ಹುಲಿ ಮರಿಗಳನ್ನು ಲೆಕ್ಕ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಎರಡು ಮಗ್ಗಲುಗಳ ಎಣಿಕೆ:

ಹುಲಿಗಳು ತಮ್ಮ ಎಡ ಮತ್ತು ಬಲಗಡೆಯಲ್ಲಿ ಬೇರೆ ಬೇರೆ ರೀತಿಯ ಪಟ್ಟಿಗಳನ್ನು ಹೊಂದಿರುತ್ತವೆ. ಹೀಗಾಗಿ ಕೆಲವೊಮ್ಮೆ ಕ್ಯಾಮರಾದಲ್ಲಿ ಸೆರೆಯಾದ ಒಂದೇ ಹುಲಿಯ ಎರಡು ಮಗ್ಗಲುಗಳನ್ನು ಬೇರೆ ಬೇರೆಯಾಗಿ ಪರಿಗಣಿಸಿರುವ ಸಾಧ್ಯತೆ ಇದೆ.

ಗುರುತು ಸಿಗದ ಹುಲಿಗಳು:

ಕೆಲವೊಂದು ವೇಳೆ ಹುಲಿಗಳು ಗುಂಪಿನಲ್ಲಿ ಹೋಗುವಾಗ ಹಿಂಬದಿಯಲ್ಲಿ ಇದ್ದ ಹುಲಿಯ ಬಾಲ ಮತ್ತು ಕಾಲಿನ ಗುರುತಿನ ಗುರುತು ಕಂಡರೂ ಅದನ್ನು ಗಣತಿಗೆ ಪರಿಗಣಿಸಲಾಗಿದೆ. ಆ ಹುಲಿಯನ್ನು ಮೊದಲೇ ಲೆಕ್ಕಹಾಕಲಾಗಿತ್ತೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಇಂತಹ ಸುಮಾರು 49 ಚಿತ್ರಗಳಿವೆ.