ನವದೆಹಲಿ[ಜು.29]: ಪ್ರಧಾನಿ ಮೋದಿ 2018ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ. 33 ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಪ್ರಸ್ತುತ ಒಟ್ಟು 2,967 ಹುಲಿಗಳಿವೆ ಎಂದು ಈ ವರದಿಯಿಂದ ತಿಳಿದು ಬಂದಿದೆ. ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಾಗಿದ್ದು, ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ.

ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿಯಲ್ಲಿ ಈ ಹಿಂದೆ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನಕ್ಕಿಳಿದಿದೆ.  526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಹಾಗೂ 442 ಹುಲಿಗಳಿರುವ ಉತ್ತರಾಖಂಡ್ ಮೂರನೇ ಸ್ಥಾನ ಪಡೆದಿದೆ.\

ಬನ್ನೇರುಘಟ್ಟದಲ್ಲಿ ಹುಲಿ ಸಫಾರಿಗೆ ಹೊಸದಾಗಿ 8 ಹುಲಿಗಳ ಸೇರ್ಪಡೆ

ವರದಿ ಬಿಡುಗಡೆ ವೇಳೆ ಸಿನಿಮಾ ಶೈಲಿಯಲ್ಲಿ ಸಂದೇಶ ನೀಡಿದ ಪ್ರಧಾನಿ ಮೋದಿ 'ಏಕ್ ಥಾ ಟೈಗರ್ ಮೂಲಕ ಆರಂಭವಾದ ಈ ಕಥೆ, ಟೈಗರ್ ಜಿಂದಾ ಹೈ ಎಂದು ಮುಂದುವರೆಯಿತು. ಇನ್ಮುಂದೆ ಅದು ಬಾಗೋಂ ಮೆಂ ಬಹಾರ್ ಹೈ' ಎಂದಾಗಬೇಕು ಎಂದಿದ್ದಾರೆ'

'ಹುಲಿಗಳ ಸಂಖ್ಯೆ ಎರಡು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕ್ಕಾಗಿ ಒಂಬತ್ತು ವರ್ಷಗಳ ಹಿಂದೆ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಿರ್ಧರಿಸಲಾಗಿತ್ತು. ಇದಕ್ಕಾಗಿ 2022ರ ಗಡಿ ಹಾಕಿಕೊಳ್ಳಲಾಗಿತ್ತು. ಆದರೆ, ನಾವು ಭಾರತದಲ್ಲಿ ನಾಲ್ಕು ವರ್ಷ ಮುಂಚಿತವಾಗಿಯೇ ಆ ಗುರಿಯನ್ನು ತಲುಪಿದ್ದೇವೆ' ಎಂದು ಪ್ರಧಾನಿ ಹೇಳಿದ್ದಾರೆ.