10 ದಿನದಲ್ಲಿ 3 ಹುಲಿ ಸಾವು! 2 ಹುಲಿ ವಿಷಪ್ರಾಶನದಿಂದ ಸತ್ತಿರುವ ಅನುಮಾನ |  ಬಂಡೀಪುರ, ಭೀಮನಕಟ್ಟೆ, ಎಚ್‌ಡಿ ಕೋಟೆಯಲ್ಲಿ ಸಾವು

ಬೆಂಗಳೂರು (ಜೂ. 25):  ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಮೂರು ಹುಲಿಗಳು ಮೃತ ಪಟ್ಟಿದ್ದು, ಈ ಪೈಕಿ ಎರಡು ಹುಲಿಗಳ ಸಾವು ವಿಷ ಪ್ರಾಶನದಿಂದ ಆಗಿರಬಹುದು ಎಂಬ ಗುಮಾನಿ ಉಂಟಾಗಿರುವ ಕಾರಣ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ವಲಯದಲ್ಲಿ ಜೂ.19ರಂದು 7 ವರ್ಷದ ಹುಲಿ ಸಾವನ್ನಪ್ಪಿದೆ. ಇದರ ದೇಹದ ಮೇಲೆ ಗಾಯದ ಗುರುತುಗಳಿದ್ದು, ಎರಡು ಹುಲಿಗಳ ಕಾದಾಟದಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಉಳಿದಂತೆ ಮೈಸೂರು ಜಿಲ್ಲೆಯ ಭೀಮನಕಟ್ಟೆಯ ಬಳಿ ಜೂ.18ರಂದು 7 ವರ್ಷದ ಗಂಡು ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಈ ಹುಲಿಯ ಮೈಮೇಲೆ ಹಳೆಯ ಗಾಯದ ಗುರುತುಗಳು ಕಂಡುಬಂದಿದ್ದು, ಕತ್ತಿನ ಮೂಳೆ ಮುರಿದಿದೆ.

ಹೊಟ್ಟೆಭಾಗದ ಹಲವು ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿದೆ. ಅಲ್ಲದೆ, ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಟೈಗರ್‌ ಬ್ಲಾಕ್‌ನಲ್ಲಿ ಜೂ.24ರಂದು ಕೊಳೆತ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದ್ದು, ಈ ಹುಲಿಗಳಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆ ವನ್ಯಜೀವಿ ಪ್ರೇಮಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಕಳೆದ ಹತ್ತು ದಿನಗಳಲ್ಲಿ ಮೂರು ಹುಲಿಗಳು ಸತ್ತಿರುವ ಸಂಬಂಧ ವರದಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

- ಸಂಜಯ್‌ ಮೋಹನ್‌, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)