ಬ್ಯಾಂಕಾಕ್[ಮೇ. 18]  ಥೈಲ್ಯಾಂಡ್ ನ  ನಾಖೋನ್‌ ರಾಟ್‌ಛಾಸಿಮಾ ಪ್ರಾಂತ್ಯದಲ್ಲಿನ ಘಟನೆ ನಿಜಕ್ಕೂ ಮಾನವ ಕುಲವೇ ತಲೆತಗ್ಗಿಸುವಂತೆ ಮಾಡಿದ್ದರೆ ಅತ್ತ ಶ್ವಾನ ಮಾತ್ರ ಹೀರೋ ಆಗಿದೆ.

 ಮಣ್ಣಿನಲ್ಲಿ ಹೂತಿಡಲಾಗಿದ್ದ ಜೀವಂತ ನವಜಾತ ಶಿಶುವಿನ ಪ್ರಾಣವನ್ನು ಅಂಗವಿಕಲ ಶ್ವಾನ ರಕ್ಷಣೆ ಮಾಡಿದೆ. ಮಣ್ಣಿನ ಅಡಿ ಹೂತಿಡಲಾಗಿದ್ದ ನವಜಾತ ಶಿಶುವನ್ನು ಮೂರು ಕಾಲಿನ ಶ್ವಾನ ರಕ್ಷಣೆ ಮಾಡಿದೆ. 15 ವರ್ಷದ ಹೆಣ್ಣುಮಗಳು ತಾಯಿಯಾಗಿದ್ದಳು. ಪಾಲಕರಿಂದ ವಿಷಯ ಮುಚ್ಚಿಡಲು ಮಗುವನ್ನು ಮಣ್ಣಿನ ಅಡಿ ಹೂತಿಟ್ಟಿದ್ದಳು.

ಪಿಂಗ್‌ ಪಾಂಗ್‌  ಹೆಸರಿನ ಶ್ವಾನ ಹೂತಿಟ್ಟಿದ್ದ ಮಗುವಿನ ವಾಸನೆ ಗ್ರಹಿಸಿ ಮಣ್ಣನ್ನು ಕೆರೆದು ಮುಚ್ಚಿದ್ದ ಗುಂಡಿಯನ್ನ ತೆಗೆಯಲು ಆರಂಭಿಸಿದೆ.  ನಾಯಿಯ ಮಾಲೀಕ  ಇದನ್ನು ಗಮನಿಸಿದಾಗ ಮಗುವಿನ ಕಾಲು ಕಾಣಿಸಿದ್ದು, ಈ ಹಿನ್ನೆಲೆ ಅವರು ಮಗುವನ್ನು ಹೊರ ತೆಗೆದಿದ್ದಾರೆ. ಜತೆಗೆ ಗ್ರಾಮಸ್ಥರೆಲ್ಲ ಸೇರಿಕೊಂಡು ಗಂಡು ನವಜಾತ ಶಿಶುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. 

ಅಪಘಾತವೊಂದರಲ್ಲಿ ಪಿಂಗ್‌ ಪಾಂಗ್‌ ಶ್ವಾನ ಕಾಲು ಕಳೆದುಕೊಂಡಿತ್ತು. ಅದು ಹುಟ್ಟಿದಾಗಿನಿಂದ ನಾನೇ ಸಾಕಿ ಬೆಳೆಸಿದ್ದೆ ಎಂದು ನಿಸೈಕಾ ಎಂಬ ಶ್ವಾನದ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿಯೂ ಶ್ವಾನದ ಕೆಲಸಕ್ಕೆ ಅಪಾರ ಮೆಚ್ಚುಗೆ ಸಿಕ್ಕಿದೆ. ಮಗು ಸದ್ಯ ಆಸ್ಪತ್ರೆಯಲ್ಲಿ  ಚೇತರಿಸಿಕೊಳ್ಳುತ್ತಿದೆ.