ವಾಷಿಂಗ್ಟನ್(ಸೆ.27): ಭಾರತೀಯ ಮುಸಲ್ಮಾನರ ಕುರಿತು ಕಳವಳ ವ್ಯಕ್ತಪಡಿಸುವ, ಅವರಿಗಾಗಿ ಮಿಡಿಯುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಕ್ಕದ ಚೀನಾದ ಉಯಿಘರ್ ಮುಸಲ್ಮಾನರ ಹೀನಾಯ ಸ್ಥಿತಿಗತಿ ಕುರಿತು ಏಕೆ ಮಾತನಾಡುವುದಿಲ್ಲ...?

ಇಂತದ್ದೊಂದು ಪ್ರಶ್ನೆಯನ್ನು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಣಿ ಕೇಳಿದ ಈ ಪ್ರಶ್ನೆಗೆ ಇಮ್ರಾನ್ ಖಾನ್‌ಗೆ ತಲೆ ತಗ್ಗಿಸದೇ ಬೇರೆ ದಾರಿ ಇರಲಿಲ್ಲ. ಅಮೆರಿಕದಲ್ಲಿ ಕಾಶ್ಮೀರ ವಿವಾದ ಕೆದಕಿ ಹೀರೋ ಆಗಲು ಯತ್ನಿಸಿದ್ದ ಇಮ್ರಾನ್ ಇದೀಗ ಅಕ್ಷರಶಃ ಜೀರೋ ಆಗಿ ಸ್ವದೇಶಕ್ಕೆ ಮರಳಲಿದ್ದಾರೆ. 


ಜಮ್ಮು ಮತ್ತು ಕಾಶ್ಮೀರದ ಮುಸಲ್ಮಾನರ ಕುರಿತು ಚಿಂತಿಸುವ ಇಮ್ರಾನ್, ಚೀನಾದ ಉಯಿಘರ್ ಮುಸಲ್ಮಾನರ ಕುರಿತು ಏಕೆ ಧ್ವನಿ ಎತ್ತುವುದಿಲ್ಲ ಎಂದು ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಅಲಿಸ್ ವೆಲ್ಸ್ ಪ್ರಶ್ನಿಸಿದ್ದಾರೆ.

ಚೀನಾದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಉಯಿಘರ್ ಮುಸಲ್ಮಾನರನ್ನು ಬಂಧನದಲ್ಲಿರಿಸಲಾಗಿದ್ದು, ಈ ಕುರಿತು ಸೊಲ್ಲೆತ್ತದ ಇಮ್ರಾನ್, ಜಮ್ಮು ಮತ್ತು ಕಾಶ್ಮೀರದ ಮುಸಲ್ಮಾನರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಅಲಿಸ್ ವೆಲ್ಸ್ ಹರಿಹಾಯ್ದಿದ್ದಾರೆ.