Asianet Suvarna News Asianet Suvarna News

ಬ್ರೆಕ್ಸಿಟ್‌ ಡೀಲ್‌ನಿಂದ ಬ್ರಿಟನ್‌ ಪ್ರಧಾನಿ ಹುದ್ದೆಗೇ ಕುತ್ತು

ಥೆರೇಸಾ ಮೇ ಪ್ರಸ್ತಾವಕ್ಕೆ ಸಂಸತ್ತಲ್ಲಿ ಐತಿಹಾಸಿಕ ಹೀನಾಯ ಸೋಲು| ಬೆನ್ನಲ್ಲೇ ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡನೆ| ಮೇ ಹುದ್ದೆ ಮಾರ್ಚ್‌ವರೆಗಾದರೂ ಉಳಿಯುತ್ತಾ?

Theresa May s deal is voted down in historic Commons defeat
Author
London, First Published Jan 17, 2019, 10:14 AM IST

ಲಂಡನ್‌[ಜ.17]: ಐರೋಪ್ಯ ಒಕ್ಕೂಟದಿಂದ ಮಾ.29ರಂದು ಸುಗಮವಾಗಿ ಹೊರನಡೆಯಲು ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಅವರು ರೂಪಿಸಿದ್ದ ಒಪ್ಪಂದಕ್ಕೆ ಬ್ರಿಟನ್‌ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಟಾಗಿದೆ. ಇದರ ಬೆನ್ನಲ್ಲೇ, ಪ್ರತಿಪಕ್ಷ ಲೇಬರ್‌ ಪಾರ್ಟಿ ಪ್ರಧಾನಮಂತ್ರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಹೀಗಾಗಿ ಪ್ರಧಾನಿ ಕುರ್ಚಿ ಹಾಗೂ ಬ್ರೆಕ್ಸಿಟ್‌ ಒಪ್ಪಂದದ ಭವಿಷ್ಯ ಎರಡೂ ಡೋಲಾಯಮಾನವಾಗಿವೆ.

28 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಐರೋಪ್ಯ ಒಕ್ಕೂಟಕ್ಕೆ 1973ರ ಮಾ.29ರಂದು ಬ್ರಿಟನ್‌ ಸೇರ್ಪಡೆಯಾಗಿತ್ತು. ಅದರಿಂದ ಹೊರಬರಬೇಕು ಎಂದು ಬ್ರಿಟನ್‌ನಲ್ಲಿ ದೊಡ್ಡ ಹೋರಾಟವೇ ನಡೆದಿತ್ತು. ಇದಕ್ಕೆ ‘ಬ್ರೆಕ್ಸಿಟ್‌’ ಎಂದು ಕರೆಯಲಾಗುತ್ತದೆ. ಈ ಸಂಬಂಧ ನಡೆದ ಜನಮತಗಣನೆಯಲ್ಲೂ ಜನರು ಬ್ರೆಕ್ಸಿಟ್‌ ಬೆಂಬಲಿಸಿದ್ದರು. ಮಾ.29ರಂದು ಐರೋಪ್ಯ ಒಕ್ಕೂಟದಿಂದ ಹೊರಬರುವ ಸಲುವಾಗಿ ಬ್ರಿಟನ್‌ ಪರವಾಗಿ ಐರೋಪ್ಯ ಒಕ್ಕೂಟದ ಜತೆ ಮಾತುಕತೆ ನಡೆಸಿ ಒಪ್ಪಂದವನ್ನು ಮೇ ರೂಪಿಸಿದ್ದರು. ಅದನ್ನು ಸಂಸತ್ತಿನ ಮುಂದೆ ಮಂಡನೆ ಮಾಡಿದಾಗ 230 ಮತಗಳಿಂದ ಸೋಲು ಉಂಟಾಗಿದೆ. ಬ್ರಿಟನ್‌ನ ಇತಿಹಾಸದಲ್ಲೇ ಇಷ್ಟೊಂದು ಅಂತರದ ಸೋಲು ಇದೇ ಮೊದಲು ಎನ್ನಲಾಗಿದೆ.

ಈ ನಡುವೆ, ಹೊಸದಾಗಿ ಒಪ್ಪಂದ ರೂಪಿಸಿಕೊಂಡು ಬರಲು ಮೇ ಅವರಿಗೆ 3 ದಿನಗಳ ಅವಕಾಶವಿದೆ. ಅದೂ ವಿಫಲವಾದರೆ ಮೂರು ವಾರಗಳಲ್ಲಿ ಪರಾರ‍ಯಯ ಒಪ್ಪಂದ ರೂಪಿಸಬೇಕಾಗುತ್ತದೆ. ಅಷ್ಟರಲ್ಲಿ ಅವಿಶ್ವಾಸಮತದಲ್ಲಿ ಅವರು ಸೋತುಬಿಟ್ಟರೆ, ಬ್ರೆಕ್ಸಿಟ್‌ ಅವ್ಯವಸ್ಥೆಯ ಗೂಡಾಗುತ್ತದೆ. ಐರೋಪ್ಯ ಒಕ್ಕೂಟದ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಬ್ರಿಟನ್‌ ಹೊರನಡೆಯಬೇಕಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

Follow Us:
Download App:
  • android
  • ios