ನವದೆಹಲಿ(ನ.11): ದಕ್ಷಿಣ ಕರೊಲಿನಾದ ಗವರ್ನರ್ ಆಗಿರುವ ಭಾರತೀಯ ಅಮೆರಿಕದವರಾದ ನಿಕ್ಕಿ ಹ್ಯಾಲೆಯವರನ್ನು ಅಮೆರಿಕದ ವಿದೇಶಾಂಗ ಸಚಿವೆಯನ್ನಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹ್ಯಾಲೆ ರಿಪಬ್ಲಿಕನ್ ಪಕ್ಷದಲ್ಲಿ ಉದಯಿಸುತ್ತಿರುವ ತಾರೆ ಎಂದು ಬಣ್ಣಿಸಲಾಗುತ್ತಿದೆ. ಅಧ್ಯಕ್ಷ ಪದವಿಯ ಪಕ್ಷದ ಅಭ್ಯರ್ಥಿಗಾಗಿ ನಡೆದಿದ್ದ ಪ್ರಾಥಮಿಕ ಚುನಾವಣೆಯಲ್ಲಿ ಹ್ಯಾಲೆಯವರು ಮಾರ್ಕೊ ರುಬಿಯೊರನ್ನು ಬೆಂಬಲಿಸಿದ್ದರು. ಆದರೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಅವರು ಟ್ರಂಪ್ ಬೆಂಬಲಿಗರಾಗಿದ್ದರು.

ಭಾರತೀಯ ವಲಸಿಗ ದಂಪತಿಯ ಮಗಳಾದ ಹ್ಯಾಲೆ ನೇಮಕಗೊಂಡಲ್ಲಿ ಟ್ರಂಪ್ ಸಚಿವ ಸಂಪುಟದಲ್ಲಿ, ಜನಾಂಗೀಯ ಹಾಗೂ ಲಿಂಗ ತಾರತಮ್ಯವನ್ನು ನಿವಾರಿಸಲಿದೆ. ನ್ಯೂಯಾರ್ಕ್‌ನ ಮಾಜಿ ಮೇಯರ್ ರೂಡಿ ಗಿಯುಲಿಯಾನಿ ಇದೇ ಹುದ್ದೆಗೆ ತೀವ್ರ ಪೈಪೋಟಿ ನೀಡಿದ್ದಾರೆ. ಟ್ರಂಪ್‌ರ ಅಕಾರ ಹಸ್ತಾಂತರ ತಂಡದ ವಕ್ತಾರ ಸೀನ್ ಸ್ಪೈಸರ್ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರ ಆದ್ಯತೆಯಲ್ಲಿರುವವರ ಪಟ್ಟಿ ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಹ್ಯಾಲೆ ಕೂಡ ಒಬ್ಬರಾಗಿದ್ದಾರೆ. ಲೂಸಿಯಾನಾದ ಮಾಜಿ ಗವರ್ನರ್ ಬಾಬ್ಬಿ ಜಿಂದಾಲ್ ಹೆಸರು ಕೂಡ ಸಂಪುಟ ಸೇರುವವರ ಪಟ್ಟಿಯಲ್ಲಿ ಸೇರಿದೆ.

ಇನ್ನೊಂದೆಡೆ ಚುನಾವಣೆ ಲಿತಾಂಶದ ಬಳಿಕ ತೀವ್ರ ಹತಾಶರಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್, ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಇನ್ನೆಂದೂ ಮನೆಯಿಂದ ಹೊರಗೆ ಹೋಗುವುದಿಲ್ಲ, ಒಳ್ಳೆಯ ಪುಸ್ತಕ ಓದಿಕೊಂಡು ಅಥವಾ ನಾಯಿಯೊಂದಿಗೆ ಆಟವಾಡಿಕೊಂಡು ಇದ್ದು ಬಿಡಬೇಕು ಎಂಬುದಾಗಿ ಕಳೆದ ವಾರ ಅನಿಸಿತ್ತು ಎಂದು ಅವರು ಹೇಳಿದ್ದಾರೆ.

ಸಿಲಿಕಾನ್ ವ್ಯಾಲಿಯಲ್ಲಿ ಏಷ್ಯನ್ ಬಾಸ್‌ಗಳು: ಸಿಲಿಕಾನ್ ವ್ಯಾಲಿಯಲ್ಲಿ ಸಾಕಷ್ಟು ಸಂಖ್ಯೆಯ ‘ಏಷ್ಯನ್ ಬಾಸ್’(ಸಿಇಒಗಳು)ಗಳಿದ್ದಾರೆ ಎಂದು ಟ್ರಂಪ್ ಆಪ್ತರೊಬ್ಬರು ಹೇಳಿರುವುದು ಇದೀಗ ಅಮೆರಿಕದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಟ್ರಂಪ್‌ರ ಮುಖ್ಯ ತಂತ್ರಗಾರರಾಗಿ ನೇಮಕಗೊಂಡಿರುವ ಸ್ಟೀನ್ ಬ್ಯಾನ್ನನ್, ಸಿಲಿಕಾನ್ ವ್ಯಾಲಿಯಲ್ಲಿ ಏಷ್ಯನ್ನರ ಪ್ರಭಾವ ಹೆಚ್ಚಿರುವ ಬಗ್ಗೆ ಉಲ್ಲೇಖಿಸಿದ್ದ ಸಂದರ್ಶನವೊಂದು ಈ ವಾರ ಅಮೆರಿಕದ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಸಿಲಿಕಾನ್ ವ್ಯಾಲಿಯಲ್ಲಿರುವ ತಂತ್ರಜ್ಞಾನ ಸಂಸ್ಥೆಗಳಲ್ಲಿ ಭಾರತೀಯ ಮೂಲದವರು ಸೇರಿದಂತೆ ಬಹುತೇಕರು ಏಷ್ಯಾ ಮೂಲದವರು ಸಿಇಒಗಳಾಗಿರುವುದನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದ್ದರು.