- Home
- News
- State
- ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲೂ LPG ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಮುಚ್ಚಲು ನಿರ್ಧರಿಸಿದ ಮಾಲೀಕರು!
ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲೂ LPG ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಮುಚ್ಚಲು ನಿರ್ಧರಿಸಿದ ಮಾಲೀಕರು!
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಇದರಿಂದಾಗಿ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್ ಮಾಡುವ ಆತಂಕ ಎದುರಾಗಿದೆ.

ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಇದೀಗ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದೆ. ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆ ದೇಶದ ಹಲವು ಭಾಗಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ
ಕಲಬುರಗಿ ನಗರದಲ್ಲಿ ಕಳೆದ ಎರಡು ದಿನಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ನಗರದಲ್ಲಿರುವ 300ಕ್ಕೂ ಹೆಚ್ಚು ಹೋಟೆಲ್‌ಗಳು ಈ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಉದ್ಯಮಿಗಳು ಕಂಗಾಲಾಗಿದ್ದಾರೆ. ಸಿಲಿಂಡರ್ ಕೊರತೆಯ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದ್ದು, ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿರುವುದಾಗಿ ತಿಳಿದು ಬಂದಿದೆ.
ರಾಯಚೂರಿನಲ್ಲಿ ಹೋಟೆಲ್ ಮಾಲೀಕರ ಪರದಾಟ
ರಾಯಚೂರಿನಲ್ಲಿಯೂ ವಾಣಿಜ್ಯ ಬಳಕೆಯ ಅಡುಗೆ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ನಾಲ್ಕು ಸಿಲಿಂಡರ್ ಕೇಳಿದರೆ ಕೇವಲ ಎರಡು ಸಿಲಿಂಡರ್ ಮಾತ್ರ ಸರಬರಾಜು ಮಾಡಲಾಗುತ್ತಿದೆ ಎಂದು ಹೋಟೆಲ್ ಮಾಲೀಕ ದಾಮೋದರ್ ಪ್ರಭು ಹೇಳಿದ್ದಾರೆ. ಸಿಲಿಂಡರ್ ಕೊರತೆಯಿಂದಾಗಿ ಮಸಾಲಾ ದೋಸೆ, ಸೆಟ್ ದೋಸೆ ಸೇರಿದಂತೆ ಹತ್ತುಕ್ಕೂ ಹೆಚ್ಚು ತಿಂಡಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸಣ್ಣ ಸಿಲಿಂಡರ್ ಬಳಕೆ
ಬಳ್ಳಾರಿಯಲ್ಲಿಯೂ ದೊಡ್ಡ 25 ಕೆಜಿ ಕಮರ್ಷಿಯಲ್ ಸಿಲಿಂಡರ್ ದೊರೆಯದೆ ಹೋಟೆಲ್ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಲವರು ಐದು ಕೆಜಿ ಸಾಮರ್ಥ್ಯದ ಸಣ್ಣ ಕಮರ್ಷಿಯಲ್ ಸಿಲಿಂಡರ್ ಬಳಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಹೆಚ್ಚುವರಿ ವೆಚ್ಚದ ಜೊತೆಗೆ ಸಾಗಾಟದಲ್ಲಿಯೂ ತೊಂದರೆ ಎದುರಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್ ನಡೆಸುವುದು ಕಷ್ಟವಾಗಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸಭೆ ಕರೆದ ಹೋಟೆಲ್ ಮಾಲೀಕರು
ಬಾಗಲಕೋಟೆ ನಗರದಲ್ಲಿಯೂ ಗ್ಯಾಸ್ ಸರಬರಾಜು ಸಮಸ್ಯೆ ಕಾಣಿಸಿಕೊಂಡಿದ್ದು, 200ಕ್ಕೂ ಹೆಚ್ಚು ಹೋಟೆಲ್‌ಗಳು ಆತಂಕದಲ್ಲಿವೆ. ಗ್ಯಾಸ್ ಪೂರೈಕೆ ಸಮರ್ಪಕವಾಗಿ ನಡೆಯದಿರುವುದರಿಂದ ಹೋಟೆಲ್ ಮಾಲೀಕರು ಶೀಘ್ರ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಬಾಗಲಕೋಟೆ ಹೋಟೆಲ್ ಮತ್ತು ಉಪಹಾರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ಗ್ಯಾಸ್ ದರದಲ್ಲೂ ಸುಮಾರು 115 ರೂಪಾಯಿ ಹೆಚ್ಚಳವಾಗಿರುವುದಾಗಿ ಅವರು ಹೇಳಿದ್ದಾರೆ.
ಬೀದರ್‌ನಲ್ಲಿ ಖಾಲಿಯಾದ ಗೋದಾಮುಗಳು
ಬೀದರ್ ಜಿಲ್ಲೆಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಸ್ಟಾಕ್ ಸಂಪೂರ್ಣ ಖಾಲಿಯಾಗಿದ್ದು, ಗೋದಾಮುಗಳಲ್ಲಿ ಖಾಲಿ ಸಿಲಿಂಡರ್‌ಗಳೇ ಕಾಣಿಸುತ್ತಿವೆ. ಕಳೆದ ಎರಡು ದಿನಗಳಿಂದ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಟೆಲ್ ಉದ್ಯಮಿಗಳು ಏಜೆನ್ಸಿಗಳನ್ನು ಸಂಪರ್ಕಿಸಿ ಸಿಲಿಂಡರ್ ಕೇಳುತ್ತಿರುವುದಾಗಿ ತಿಳಿದು ಬಂದಿದೆ. ಸ್ಟಾಕ್ ಬಂದ ಬಳಿಕವೇ ವಿತರಣೆ ಸಾಧ್ಯ ಎಂದು ಏಜೆನ್ಸಿ ಮಾಲೀಕರು ತಿಳಿಸಿದ್ದಾರೆ.
ವಿಜಯಪುರದಲ್ಲೂ ಆತಂಕ
ವಿಜಯಪುರದಲ್ಲಿ ದಿನಕ್ಕೆ ಮೂರುರಿಂದ ನಾಲ್ಕು ಸಿಲಿಂಡರ್ ಅಗತ್ಯವಿರುವ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಲೀಕರು ಆತಂಕದಲ್ಲಿದ್ದಾರೆ. ಸಾಲ ಮಾಡಿ ಹೋಟೆಲ್ ಆರಂಭಿಸಿರುವ ನಮಗೆ ಹೋಟೆಲ್ ಬಂದ್ ಆದ್ರೆ ಬಾಡಿಗೆ ಹಾಗೂ ಸಿಬ್ಬಂದಿ ಸಂಬಳ ಹೇಗೆ ಕೊಡಬೇಕು ಎಂಬ ಚಿಂತೆಯಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಧಾರವಾಡದಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ
ಧಾರವಾಡ ಜಿಲ್ಲೆಯಲ್ಲಿಯೂ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಸುಮಾರು 60 ರೂಪಾಯಿ ಹೆಚ್ಚಳವಾಗಿದೆ ಎಂದು ಗೃಹಿಣಿಯರು ಆರೋಪಿಸಿದ್ದಾರೆ. ಬೆಲೆ ಏರಿಕೆಯ ಕಾರಣದಿಂದ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಿಲಿಂಡರ್ ದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ LPG ಮತ್ತು CNG ಬೆಲೆ ಏರಿಕೆ
ಹುಬ್ಬಳ್ಳಿಯಲ್ಲಿ LPG ಹಾಗೂ CNG ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಲೀಟರ್‌ಗೆ ಸುಮಾರು 10 ರೂಪಾಯಿ ಏರಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಉಚಿತ ಬಸ್ ಯೋಜನೆಯಿಂದ ಆಟೋ ಉದ್ಯಮಕ್ಕೆ ಹೊಡೆತ ಬಿದ್ದಿರುವುದರಿಂದ ಈ ಬೆಲೆ ಏರಿಕೆ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ ಎಂದು ಚಾಲಕರು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮಕ್ಕೂ ಪರಿಣಾಮ
ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿಕೊಂಡಿರುವ ಹೋಟೆಲ್ ಉದ್ಯಮಿಗಳಿಗೆ ಗ್ಯಾಸ್ ಕೊರತೆ ದೊಡ್ಡ ಸಮಸ್ಯೆಯಾಗಿದೆ. ದಿನಕ್ಕೆ ನಾಲ್ಕು ರಿಂದ ಆರು ಸಿಲಿಂಡರ್ ಬೇಕಾಗಿದ್ದ ಜಾಗದಲ್ಲಿ ಕೇವಲ ಎರಡು ಸಿಲಿಂಡರ್ ಮಾತ್ರ ಪೂರೈಕೆ ಆಗುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೋ ಎಂಬ ಆತಂಕದಲ್ಲೇ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಕೊಡಗಿನಲ್ಲಿ ನಾಲ್ಕು ದಿನಗಳಿಂದ ಸಿಲಿಂಡರ್ ಇಲ್ಲ
ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಆಗಿಲ್ಲ. ಮೈಸೂರಿನ ಹೆಬ್ಬಾಳ ಘಟಕದಿಂದ ಪೂರೈಕೆಯಾಗುವ ಅನಿಲವನ್ನು ಪ್ರಸ್ತುತ ಗೃಹ ಬಳಕೆಗೆ ಮಾತ್ರ ನೀಡಲಾಗುತ್ತಿರುವುದರಿಂದ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರು ಆತಂಕದಲ್ಲಿದ್ದಾರೆ.
ದಾವಣಗೆರೆಯಲ್ಲಿ ಎಲೆಕ್ಟ್ರಿಕ್ ಸ್ಟೋ ಬಳಕೆಗೆ ಮನವಿ
ದಾವಣಗೆರೆಯಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ ಮಾಲೀಕರು ಇರುವ ಸ್ಟಾಕ್ ಬಳಸಿ ಸೇವೆ ಮುಂದುವರೆಸುತ್ತಿದ್ದಾರೆ. ಆದರೆ ಸಿಲಿಂಡರ್ ಸಿಗದಿದ್ದರೆ ಎಲೆಕ್ಟ್ರಿಕ್ ಸ್ಟೋ ಬಳಸಿ ಅಡುಗೆ ಮಾಡಲು ಹೆಚ್ಚಿನ ಯೂನಿಟ್ ವಿದ್ಯುತ್ ಬಳಸಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೋಟೆಲ್ ಬಂದ್ ಆತಂಕ
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಮುಂದುವರೆದರೆ ಹೋಟೆಲ್‌ಗಳನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಎಚ್ಚರಿಕೆ ನೀಡಿದ್ದಾರೆ. ಹೋಟೆಲ್ ಬಂದ್ ಆದರೆ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಭಾರತದಲ್ಲಿಯೂ ಆರ್ಥಿಕ ಹಾಗೂ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಹೋಟೆಲ್ ಉದ್ಯಮಿಗಳು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

