ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯರ ಕಿಂಗ್‌ಫಿಶರ್ ಟವರ್ಸ್ ಪೆಂಟ್‌ಹೌಸ್‌ ಅನ್ನು ಒಂದು ರಾತ್ರಿ ಬಾಡಿಗೆಗೆ ಕೇಳಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿರುವ ಈ ಐಷಾರಾಮಿ ಬಂಗಲೆಯು ಸದ್ಯಕ್ಕೆ ಅಪೂರ್ಣವಾಗಿದೆ.

ಬೆಂಗಳೂರು (ಮಾ.10): ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದ, ಬೆಂಗಳೂರಿನ ಐಕಾನಿಕ್ 'ಕಿಂಗ್‌ಫಿಶರ್ ಟವರ್ಸ್' ಪೆಂಟ್‌ಹೌಸ್‌ ಅನ್ನು ಒಂದು ರಾತ್ರಿ ಬಾಡಿಗೆಗೆ ನೀಡುತ್ತೀರಾ? ಹೀಗಂತ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ಮಲ್ಯಗೆ ಬಹಿರಂಗವಾಗಿಯೇ ಕೇಳಿದ್ದಾರೆ. "ನಾನು ತುಂಬಾ ಸೀರಿಯಸ್ ಆಗಿ ಕೇಳ್ತಿದ್ದೇನೆ, ನೀವೇ ಬೆಲೆ ನಿಗದಿಪಡಿಸಿ, ಎಷ್ಟೇ ಮೊತ್ತವಾದರೂ ಪಾವತಿ ಮಾಡುತ್ತೇನೆ" ಎಂದು ಕೇಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಪ್ರಿಯಮ್ ರಾಜ್ ಎಂಬ ಸ್ಟಾರ್ಟ್‌ಅಪ್ ಸಂಸ್ಥಾಪಕರು ಎಕ್ಸ್ (ಟ್ವಿಟರ್) ಮೂಲಕ ವಿಜಯ್ ಮಲ್ಯ ಅವರನ್ನು ಟ್ಯಾಗ್ ಮಾಡಿ ಈ ಇಂಟ್ರೆಸ್ಟಿಂಗ್ ಪ್ರಸ್ತಾವನೆ ಮುಂದಿಟ್ಟಿದ್ದಾರೆ. "ಆತ್ಮೀಯ ವಿಜಯ್ ಮಲ್ಯ ಅವರೇ, ನಾನು ಬೆಂಗಳೂರಿನ ಉದ್ಯಮಿ. ಮಾರ್ಚ್ 23ಕ್ಕೆ ನನ್ನ ಹುಟ್ಟುಹಬ್ಬವಿದೆ. ಬೆಂಗಳೂರು ನಗರ ಇದುವರೆಗೆ ನೋಡಿರದಂತಹ ಅದ್ಧೂರಿ ಪಾರ್ಟಿಯನ್ನು ಅಲ್ಲಿ ನೀಡಬೇಕು ಹಾಗೂ ಆ 'ಗುಡ್ ಟೈಮ್ಸ್' ದಿನಗಳನ್ನು ಮತ್ತೆ ನೆನಪಿಸಬೇಕು ಎಂದುಕೊಂಡಿದ್ದೇನೆ. ಬೆಂಗಳೂರಿಗೆ ಈಗ ಆ ಎನರ್ಜಿಯ ಅಗತ್ಯವಿದೆ" ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, "ಕಿಂಗ್‌ಫಿಶರ್ ವಿಲ್ಲಾವನ್ನು (ಪೆಂಟ್‌ಹೌಸ್) ಒಂದು ರಾತ್ರಿಗೆ ಬಾಡಿಗೆಗೆ ನೀಡಲು ಸಾಧ್ಯವೇ? ನಾನು ತಮಾಷೆ ಮಾಡುತ್ತಿಲ್ಲ, ತುಂಬಾ ಸೀರಿಯಸ್ ಆಗಿದ್ದೇನೆ. ನೀವು ಕೇಳಿದಷ್ಟು ಹಣ ನೀಡುತ್ತೇನೆ. ಒಂದು ವೇಳೆ ಇದರ ಒಡೆತನ ಈಗ ನಿಮ್ಮ ಬಳಿ ಇಲ್ಲದಿದ್ದರೆ, ಅದು ಯಾರ ಬಳಿ ಇದೆ ಎಂಬ ಮಾಹಿತಿ ನೀಡಿ" ಎಂದು ಕೇಳಿದ್ದಾರೆ.

'ಫನ್ ಟ್ವೀಟ್' ಎಂದ ಉದ್ಯಮಿ!

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಪ್ರಿಯಮ್ ರಾಜ್, ಇದೊಂದು ತಮಾಷೆಯ ಟ್ವೀಟ್ ಆಗಿತ್ತು ಎಂದಿದ್ದಾರೆ. "ಕಳೆದ ಬಾರಿ ಕಿಂಗ್‌ಫಿಶರ್ ಟವರ್ ಎದುರಿಗಿನ 'ಸ್ಕೈ' (Skyee) ಹೋಟೆಲ್‌ನಲ್ಲಿ ನನ್ನ ಬರ್ತ್‌ಡೇ ಆಚರಿಸಿಕೊಂಡಿದ್ದೆ. ಆಗ ಈ ಬಿಲ್ಡಿಂಗ್ ನೋಡಿ ಮೇಲೆ ಪಾರ್ಟಿ ಮಾಡಿದರೆ ಹೇಗಿರುತ್ತದೆ ಎಂದು ಯೋಚಿಸಿದ್ದೆ. ಈಗ ಈ ಟ್ವೀಟ್ ಸುದ್ದಿಯಾದ ಮೇಲೆ ನಾನು ಗಂಭೀರವಾಗಿ ಯೋಚಿಸುತ್ತಿದ್ದೇನೆ" ಎಂದಿದ್ದಾರೆ.

Scroll to load tweet…

10 ವರ್ಷಗಳಿಂದ ಖಾಲಿ ಬಿದ್ದಿದೆ ಕೋಟಿ ಬೆಲೆಯ ಬಂಗಲೆ!

ನಗರದ ಮಧ್ಯಭಾಗದಲ್ಲಿರುವ ಈ ಸುಂದರ ಕಟ್ಟಡ ಬಳಕೆಯಾಗದೆ ಉಳಿದಿರುವ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಆಕಾಶದಲ್ಲಿರುವ ಈ ಮಲ್ಟಿ-ಮಿಲಿಯನ್ ಡಾಲರ್ ಬಂಗಲೆ ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿದೆ. ಸುಂದರವಾದ ವಸ್ತುಗಳಿದ್ದರೆ ಅದನ್ನು ಯಾರಾದರೂ ಬಳಸಬೇಕು. ಜೀವನ ತುಂಬಾ ಚಿಕ್ಕದು, ಭೂಮಿ ಎನ್ನುವ ಗ್ರಹದ ಮೇಲೆ ನಾವು ಇರುವಾಗಲೇ ಒಂದು ಒಳ್ಳೆಯ ಪಾರ್ಟಿ ಮಾಡಬೇಕು" ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಸ್ವತಃ ವಿಜಯ್ ಮಲ್ಯ ಅವರೇ ಈ ಬಗ್ಗೆ ಮಾತನಾಡಿದ್ದರು. "ಆ ಐಷಾರಾಮಿ ಪೆಂಟ್‌ಹೌಸ್ ಇನ್ನೂ ಅಪೂರ್ಣವಾಗಿದೆ ಹಾಗೂ ಲಿಕ್ವಿಡೇಶನ್ (ಹಣಕಾಸಿನ ವಿವಾದ) ಪ್ರಕ್ರಿಯೆಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಕೆಲಸ ಅರ್ಧಕ್ಕೆ ನಿಂತಿದೆ" ಎಂದು ಮಾಹಿತಿ ನೀಡಿದ್ದರು.