ನ್ಯೂಯಾರ್ಕ್[ಅ.03]: ಅಮೆರಿಕಾದ ನ್ಯೂಯಾರ್ಕ್ ನ ಬ್ರಾನ್ಸ್ ಜೂನಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಅಗುತ್ತಿದೆ. ಯುವತಿಯೊಬ್ಬಳು ತಮಾಷೆಗಾಗಿ ಸಿಂಹದ ಬೋನಿಗಿಳಿದಿದ್ದಾಳೆ. ಅದೃಷ್ಟವಶಾತ್ ಸಿಂಹ ಸುಮ್ಮನಿದ್ದು, ಆಕೆ ಯಾವುದೇ ಅಪಾಯವಿಲ್ಲದೇ ಮರಳಿ ಬಂದಿದ್ದಾಳೆ.

ಹೌದು ಸಿಂಹ ಅತ್ಯಂತ ಅಪಾಯಕಾರಿ ಪ್ರಾಣಿ. ಈ ವಿಚಾರ ತಿಳಿದಿದ್ದರೂ ಯುವತಿಯೊಬ್ಬಳು ಮೋಜು ಮಸ್ತಿಗಾಗಿ ಸಿಂಹದ ಎದುರು ನಿಂತು  ಲೇವಡಿ ಮಾಡಿದ್ದಾಳೆ. ಈಕೆಯ ಈ ದುಸ್ಸಾಹಸಕ್ಕೆ ನೆಟ್ಟಿಗರು ಕಮೆಂಟ್ ಮೂಲಕ ಬೈದಿದ್ದಾರೆ.

ಈ ಘಟನೆಯ ವಿಡಿಯೋವನ್ನು ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಇದನ್ನು ಶೇರ್ ಮಾಡಿಕೊಂಡಿರುವ ಆ ವ್ಯಕ್ತಿ 'ಕೊನೆಯವರೆಗೂ ಈ ವಿಡಿಯೋ ನೋಡಿ, ಏನಾಯ್ತೆಂದು ನಿಮಗೆ ಊಹಿಸಲೂ ಸಾಧ್ಯವಿಲ್ಲ' ಎಂದಿದ್ದಾರೆ. ಯುವತಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಿಂಹ ಆಕೆ ಎದುರು ಬಂದು ನಿಂತಿದೆ. ಸಿಂಹ ನೋಡಿದ ಕೂಡಲೇ ಯುವತಿ ತನ್ನ ಕೈಗಳನ್ನು ಬೀಸಿ ಲೇವಡಿ ಮಾಡಲಾರಂಭಿಸಿದ್ದಾಳೆ. ಸಿಂಹ ಆಕೆಯನ್ನು ದಿಟ್ಟಿಸಿ ನೋಡುತ್ತಾ ನಿಂತಿದೆ. ಆದರೆ ಅದೃಷ್ಟವಶಾತ್ ಏನೂ ಮಾಡಿಲ್ಲ

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಯುವತಿಯ ಈ ದುಸ್ಸಾಹಸವನ್ನು ಮೂರ್ಖತನ ಎಂದು ಬಣಿಸಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ 'ಇದೊಂದು ಮೂರ್ಖತನದಿಂದ ಕೂಡಿದ ಕೃತ್ಯ. ಒಂದು ವೇಳೆ ಸಿಂಹ ಅಟ್ಯಾಕ್ ಮಾಡಿದ್ದರೆ, ಪ್ರಾಣಿ ಸಂಗ್ಹಾಲಯದ ಸಿಬ್ಬಂದಿ ಸಿಂಹಕ್ಕೇ ಶಿಕ್ಷೆ ನೀಡುತ್ತಿದ್ದರು. ಯಾರ ತಪ್ಪು ಎಂದು ಕೂಡಾ ನೋಡುತ್ತಿರಲಿಲ್ಲ' ಎಂದಿದ್ದಾರೆ.

ನಿಯಮ ಉಲ್ಲಂಘಿಸಿ ದುಸ್ಸಾಹಸಕ್ಕೆ ಕೈ ಹಾಕಿದ ಯುವತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ