ನವದೆಹಲಿ (ಮೇ. 16): ದೇಶದ ವಾಣಿಜ್ಯ ನಗರಿಯನ್ನು ದಶಕಗಳ ಕಾಲ ಅಕ್ಷರಃಶ ಆಳಿದ್ದ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ ಅವರ ಮನೆ ‘ಮಾತೋಶ್ರೀ’ ಮೇಲೆ ಬಾಂಬ್‌ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

1989ರಲ್ಲಿ ನಡೆದಿದ್ದ ಇಂಥದ್ದೊಂದು ಸಂಚಿನ ಬಗ್ಗೆ ಠಾಕ್ರೆ ಆಪ್ತರಾಗಿದ್ದ, ಹಾಲಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾರಾಯಣ ರಾಣೆ ಬಹಿರಂಗಪಡಿಸಿದ್ದಾರೆ. ಬಿಡುಗಡೆಗಡೆಗೆ ಸಿದ್ಧವಾಗಿರುವ ರಾಣೆ ಅವರ ಆತ್ಮಚರಿತ್ರೆ ‘ನೋ ಹೋಲ್ಡ್‌ ಬಾರ್‌ಡ್‌: ಮೈ ಇಯ​ರ್‍ಸ್ ಇನ್‌ ಪಾಲಿಟಿಕ್ಸ್‌’ನಲ್ಲಿ ಅಚ್ಚರಿಯ ಮಾಹಿತಿ ಇದೆ.

‘ಖಲಿಸ್ತಾನ್‌ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಬಾಳಾಠಾಕ್ರೆ ಕೂಡಾ ಇದ್ದರು. ಈ ಹಿನ್ನೆಲೆಯಲ್ಲಿ 1988ರಲ್ಲಿ ಮುಂಬೈನಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿದ್ದ ಠಾಕ್ರೆ, ಅಲ್ಲಿಗೆ ವಿವಿಧ ಸಿಖ್‌ ಸಂಘಟನೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿದ್ದರು.

ಅವರೆಲ್ಲರಿಗೂ ನಾವು ಯಾವುದೇ ಕಾರಣಕ್ಕೂ ಯಾವುದೇ ಖಲಿಸ್ತಾನ್‌ ಉಗ್ರರ ಚಟುವಟಿಕೆಗಳಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡುವಂತೆ ಠಾಕ್ರೆ ಸೂಚಿಸಿದ್ದರು. ಒಂದು ವೇಳೆ ಸಿಖ್‌ ಸಂಘಟನೆಗಳು ನೆರವು ಮುಂದುವರೆಸಿದ್ದೇ, ಆದಲ್ಲಿ ಮುಂಬೈ ಮಹಾನಗರಿಯಲ್ಲಿ ಸಿಖ್ಖರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕಾರ ಹಾಕುವ ಬೆದರಿಕೆಯನ್ನೂ ಠಾಕ್ರೆ ಹಾಕಿದ್ದರು’

’ಈ ನಡುವೆ 1989ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸೋಲನ್ನಪ್ಪಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ, ಠಾಕ್ರೆ ಜೀವಕ್ಕಿದ್ದ ಭೀತಿ ಇನ್ನಷ್ಟುಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಠಾಕ್ರೆ ತಮ್ಮ ಮನೆಗೆ ತಾವೇ ಒದಗಿಸಿದ್ದ ಭದ್ರತೆಯನ್ನು ಇನ್ನಷ್ಟುಹೆಚ್ಚಿಸಿಕೊಂಡರು.

ಈ ಎಲ್ಲಾ ಘಟನೆಗಳ ಬೆನ್ನಲ್ಲೇ, ಠಾಕ್ರೆ ಕುಟುಂಬಕ್ಕೆ ಆಪ್ತರಾಗಿದ್ದ ಆಗಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ಶರದ್‌ ಪವಾರ್‌ ಒಂದು ದಿನ ಬಾಳಾಠಾಕ್ರೆ ಅವರ ಪುತ್ರ ಉದ್ಧವ್‌ರನ್ನು ತುರ್ತಾಗಿ ತಮ್ಮ ಕಚೇರಿಗೆ ಕರೆಸಿಕೊಂಡು, ಮಾತೋಶ್ರೀ ಮೇಲೆ ದಾಳಿಗೆ ಉಗ್ರರು ಸಂಚು ನಡೆಸಿದ್ದಾರೆ.

ದಾಳಿ ನಡೆಸಲು ಸಜ್ಜಾಗಿರುವ ಉಗ್ರರು ಈಗಾಗಲೇ ಮುಂಬೈ ಪ್ರವೇಶ ಕೂಡಾ ಮಾಡಿದ್ದಾರೆ. ಇಂಥದ್ದೊಂದು ಕೃತ್ಯಕ್ಕೆ ಮಾತೋಶ್ರೀಯಲ್ಲಿರುವ ಕೆಲ ಸಿಬ್ಬಂದಿಗಳು, ಪೊಲೀಸ್‌ ಇಲಾಖೆಯಲ್ಲಿರುವ ಕೆಲ ವ್ಯಕ್ತಿಗಳು ಮತ್ತು ಗೃಹ ಸಚಿವಾಲಯದ ಕೆಲ ಸಿಬ್ಬಂದಿ ಕೂಡಾ ಕೈ ಜೋಡಿಸಿದ್ದಾರೆ. ಇನ್ನೆರಡು ದಿನಗಳಲ್ಲೇ ಬಾಂಬ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸ್ಫೋಟಕ ಮಾಹಿತಿಯನ್ನೂ ರವಾನಿಸಿದ್ದರು. ಅಲ್ಲದೆ ತಂದೆಗೆ ಈ ವಿಷಯ ತಿಳಿಸುವಂತೆ ಸೂಚಿಸಿದ್ದರು.

ಕೂಡಲೇ ಮನೆಗೆ ಮರಳಿಸಿದ ಉದ್ಧವ್‌ ತಮ್ಮ ತಂದೆ ಬಾಳಾಗೆ ಈ ಮಾಹಿತಿ ನೀಡಿದರು. ವಿಷಯದ ಗಂಭೀರತೆ ಅರಿತ ಬಾಳಾಠಾಕ್ರೆ, ತಕ್ಷಣವೇ ಮನೆಯ ಎಲ್ಲಾ ಸದಸ್ಯರನ್ನು ಬೇರೆ ಬೇರೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದರು. ಅಲ್ಲದೇ ಮಾರನೇ ದಿನವೇ ತಾವು ತಮ್ಮ ಪತ್ನಿಯೊಡಗೂಡಿ ಲೋನಾವಾದಲ್ಲಿರುವ ಮನೆಗೆ ತೆರಳಿದ್ದರು’ ಎಂದು ರಾಣೆ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.