Asianet Suvarna News Asianet Suvarna News

ವಿಶ್ವದರ್ಜೆಯ ಟೆಂಡರ್‌ಶ್ಯೂರ್‌ ಮಾನದಂಡದಡಿ ನಿರ್ಮಾಣವಾಗಲಿದೆ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಸುತ್ತಲಿನ ರಸ್ತೆಗಳು

ಉದ್ಯಾನನಗರಿ ಕೇಂದ್ರ ಭಾಗದ ಮೆಜೆಸ್ಟಿಕ್ ಹಾಗೂ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನೂ ‘ಟೆಂಡರ್‌ಶ್ಯೂರ್‌ಮಯ’ ಮಾಡಲು ಮೆಜೆಸ್ಟಿಕ್-ಕೆ.ಆರ್. ಮಾರುಕಟ್ಟೆ ಸುತ್ತಲಿನ ಆರು ಪ್ರಮುಖ ರಸ್ತೆಗಳನ್ನು ‘ಟೆಂಡರ್‌ಶ್ಯೂರ್’ ಅಡಿ ನಿರ್ಮಾಣ ಮಾಡಲು ಟೆಂಡರ್ ಅಂತಿಮಗೊಳಿಸಲಾಗಿದೆ.

TenderSURE Majestic Market to have world class roads at Rs 130 crore
 ಬೆಂಗಳೂರು (ಜು.03): ಉದ್ಯಾನನಗರಿ ಕೇಂದ್ರ ಭಾಗದ ಮೆಜೆಸ್ಟಿಕ್ ಹಾಗೂ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನೂ ‘ಟೆಂಡರ್‌ಶ್ಯೂರ್‌ಮಯ’ ಮಾಡಲು ಮೆಜೆಸ್ಟಿಕ್-ಕೆ.ಆರ್. ಮಾರುಕಟ್ಟೆ ಸುತ್ತಲಿನ ಆರು ಪ್ರಮುಖ ರಸ್ತೆಗಳನ್ನು ‘ಟೆಂಡರ್‌ಶ್ಯೂರ್’ ಅಡಿ ನಿರ್ಮಾಣ ಮಾಡಲು ಟೆಂಡರ್ ಅಂತಿಮಗೊಳಿಸಲಾಗಿದೆ.
 ಈ ಮೂಲಕ ಸದ್ಯದಲ್ಲೇ ಕೆ.ಆರ್. ಮಾರುಕಟ್ಟೆ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲೂ ವಿಶ್ವದರ್ಜೆಯ ಟೆಂಡರ್‌ಶ್ಯೂರ್‌ ಮಾನದಂಡದಡಿ ರಸ್ತೆಗಳು ನಿರ್ಮಾಣಗೊಳ್ಳಲಿವೆ. ಪರಿಣಾಮ ಈ ಭಾಗಗಲ್ಲಿ ಈಗಾಗಲೇ ಕಡಿಮೆ ವಿಸ್ತೀರ್ಣ ಹೊಂದಿರುವ ರಸ್ತೆಗಳು ಮತ್ತಷ್ಟು ಕುಗ್ಗಲಿದ್ದು, ಪಾದಚಾರಿ ಮಾರ್ಗಗಳ ವಿಸ್ತೀರ್ಣ ಭಾಗಶಃ ದುಪ್ಪಟ್ಟಾಗಲಿದೆ. 
2016 ರ ಜೂನ್‌ನ ಸರ್ಕಾರಿ ಆದೇಶದಂತೆ 3ನೇ ಹಂತದಲ್ಲಿ ಒಟ್ಟು 13 ರಸ್ತೆಗಳನ್ನು ಟೆಂಡರ್‌ಶ್ಯೂರ್ ಅಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಇದರಲ್ಲಿ ಪ್ರಥಮ ಭಾಗವಾಗಿ ಆರು ರಸ್ತೆಗಳನ್ನು 130 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಬಿಬಿಎಂಪಿ ಇತ್ತೀಚೆಗೆ ಕರೆದಿದ್ದ ಟೆಂಡರ್‌ನ್ನು ಇದೀಗ ಅಂತಿಮಗೊಳಿಸಲಾಗಿದೆ. ಟೆಂಡರ್ ಅಂತಿಮಗೊಂಡಿದ್ದು ಸರ್ಕಾರದ ಅನುಮತಿ ಪಡೆದು ಕಾಮಗಾರಿ ಶುರು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ‘ಕನ್ನಡಪ್ರಭಕ್ಕೆ’ ತಿಳಿಸಿದ್ದಾರೆ.
ಇದರಡಿ ಆರು ರಸ್ತೆಗಳನ್ನು ಗುರುತಿಸಿದ್ದು, ಇದರಲ್ಲಿ ಗಾಂಧಿನಗರದ ಸುತ್ತಮುತ್ತ 4.30 ಕಿ.ಮೀ. (ಒಂದೇ ಪ್ಯಾಕೇಜ್) ಉದ್ದದ ಎಲ್ಲಾ ರಸ್ತೆಗಳು ಹಾಗೂ ಅಡ್ಡರಸ್ತೆಗಳನ್ನೂ ಟೆಂಡರ್‌ಶ್ಯೂರ್ ಅಡಿ ನಿರ್ಮಿಸಲಾಗುತ್ತಿದೆ. ಅಣ್ಣಮ್ಮ ದೇವಸ್ಥಾನದ ರಸ್ತೆಯಿಂದ ಕನಕದಾಸ ವೃತ್ತದವರೆಗಿನ ಮುಖ್ಯ ರಸ್ತೆ, ಸಪ್ನಾ ಬುಕ್‌ಹೌಸ್ ಮುಂದಿನ ರಸ್ತೆ, ಯಾತ್ರಿನಿವಾಸ್ ರೆಸ್ಟೋರೆಂಟ್ ಮುಂದಿನ ರಸ್ತೆ, ಸಾಯಿ ರಾಂ ರೆಸಿಡೆನ್ಸಿ, ಸಂಗಂ ಲಾಡ್ಜ್, ಗಾಂಧಿನಗರ ಪಾರ್ಕ್ ಸುತ್ತಮುತ್ತಲಿನ ಎಲ್ಲಾ ಅಡ್ಡರಸ್ತೆಗಳನ್ನೂ ಟೆಂಡರ್‌ಶ್ಯೂರ್ ಅಡಿ ಅಭಿವೃದ್ಧಿಪಡಿಸಲು ಟೆಂಡರ್ ಮಾಡಲಾಗಿದೆ.
ಟೆಂಡರ್‌ಶ್ಯೂರ್ ಮಾದರಿ:
ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳನ್ನು ಟೆಂಡರ್‌ಶ್ಯೂರ್ ಅಡಿ ಅಭಿವೃದ್ಧಿಪಡಿಸಿದ್ದು, ಇದರಡಿ ರಸ್ತೆ ವಿಸ್ತೀರ್ಣ ಯೂನಿಫಾರ್ಮ್ (ಕ್ಯಾರೇಜ್ ವೇ) ಮಾಡುವುದು ಹಾಗೂ ರಸ್ತೆಗಳನ್ನು ಕಾಂಕ್ರೀಟ್ ಅಥವಾ ವೈಟ್ ಟಾಪಿಂಗ್ ರಸ್ತೆಯಾಗಿ ಅಭ್ವಿದ್ಧಿಪಡಿಸಲಾಗುವುದು. ಮಳೆ ನೀರು ಮಾರ್ಗ, ವಿದ್ಯುತ್ ಕೇಬಲ್, ಕುಡಿಯುವ ನೀರಿನ ಮಾರ್ಗಗಳಿಗೆ ಪ್ರತ್ಯೇಕ ಡಕ್ಟ್ ಅಳವಡಿಸಿ ವಿಸ್ತಾರವಾದ ಪಾದಚಾರಿ ಮಾರ್ಗ ಕಲ್ಪಿಸಲಾಗುವುದು. ಕಾರು ಪಾರ್ಕಿಂಗ್ ಹಾಗೂ ದ್ವಿ ಚಕ್ರವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದರ ಜತೆಗೆ ಸೈಕಲ್ ಸವಾರರಿಗಾಗಿ ಪ್ರತ್ಯೇಕ ಸೈಕಲ್ ಪಥ ಮೀಸಲಿಡಲಾಗುವುದು. ಪ್ರತ್ಯೇಕ ಬಸ್-ಬೆ, ಬಸ್ ಶೆಲ್ಟರ್, ಮೀಡಿಯನ್ಸ್ ಮಾಡಲಾಗುವುದು. 
 
ರಸ್ತೆಯ ಹೆಸರು ಎಲ್ಲಿಂದ-ಎಲ್ಲಿವರೆಗೆ   ಉದ್ದ ಫುಟ್‌ಪಾತ್ ಹೆಚ್ಚಳ
1- ಸುಬೇದಾರ್ ಚತ್ರಂ ರಸ್ತೆ  -   ಕೆ.ಜಿ. ರಸ್ತೆಯಿಂದ ಆನಂದ್‌ರಾವ್ ವೃತ್ತ- 0.60 ಕಿ.ಮೀ.- 3 ಮೀ.ನಿಂದ 3.5 ಮೀ.
2- ಗುಬ್ಬಿ ತೋಟದಪ್ಪ ರಸ್ತೆ- ಖೋಡೆ ವೃತ್ತದಿಂದ ಕೆ.ಜಿ. ರಸ್ತೆ- 1.68 ಕಿ.ಮೀ.- 3 ಮೀ.ನಿಂದ 6 ಮೀ.
3. ಧನವಂತರಿ ರಸ್ತೆ-  ಉಪ್ಪಾರಪೇಟೆ ಪೊಲೀಸ್‌ಠಾಣೆಯಿಂದ ಆನಂದ್‌ರಾವ್ ವೃತ್ತ- 1.05 ಕಿ.ಮೀ. - 3 ಮೀ.ನಿಂದ ೭ಮೀ.
4. ಡಬ್ಲ್ಯೂ.ಎಚ್. ಹನುಮಂತಪ್ಪ ರಸ್ತೆ - ಶೇಷಾದ್ರಿರಸ್ತೆಯಿಂದ  ಕೆ.ಜಿ. ರಸ್ತೆ. - 0.56 ಕಿ.ಮೀ. - 2 ಮೀ.ನಿಂದ 4 ಮೀ.
5. ಗಾಂಧಿನಗರ ಸುತ್ತಮುತ್ತ - ವಿವಿಧ ರಸ್ತೆ - 4.60 ಕಿ.ಮೀ.- 2 ಮೀ.ನಿಂದ 3 ಮೀ.
6. ಕೆ.ಆರ್. ಮಾರುಕಟ್ಟೆ ಸುತ್ತಮುತ್ತ- ಬಾಷ್ಯಂ ರಸ್ತೆ, ಸೇತುರಾವ್ ರಸ್ತೆ, ಗುಂಡ್‌ಪಂಥ್ ಹಾಘೂ ವೆಂಕಟರಾವ್ ರಸ್ತೆ. - 2 ಕಿ.ಮೀ.- 2 ಮೀ.ನಿಂದ 3ಮೀ.
 
ಗಣನೀಯವಾಗಿ ಕುಗ್ಗಲಿದೆ ರಸ್ತೆ ವಿಸ್ತೀರ್ಣ
ಆರೂ ರಸ್ತೆಗಳಲ್ಲೂ ವಾಹನಗಳ ಸಂಚಾರದ ರಸ್ತೆ ವಿಸ್ತೀರ್ಣ ಗಣನೀಯವಾಗಿ ಕುಸಿಯಲಿದೆ. ಪ್ರತಿ ರಸ್ತೆಯ ವಿಸ್ತೀರ್ಣವನ್ನು ಕುಗ್ಗಿಸಿ ಫುಟ್‌ಪಾತ್ ವಿಸ್ತೀರ್ಣ ಹೆಚ್ಚಳ ಮಾಡಿ ಜತೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ರಸ್ತೆಗಳನ್ನು ಜಂಕ್ಷನ್‌ನಿಂದ ಜಂಕ್ಷನ್‌ವರೆಗೆ ಸಮಾನ ವಿಸ್ತೀರ್ಣ ಕಾಯ್ದುಕೊಳ್ಳುವಂತೆ ಮಾಡಲಾಗುವುದು.
  
* ರಸ್ತೆ ರಸ್ತೆಯ ಹಾಲಿ ವಿಸ್ತೀರ್ಣ ಉದ್ದೇಶಿತ ರಸ್ತೆ ವಿಸ್ತೀರ್ಣ
ಸುಬೇದಾರ್ ಛತ್ರ ರಸ್ತೆ - 10-14 ಮೀ. - 6.6-9.9 ಮೀ.
ಗುಬ್ಬಿ ತೋಟದಪ್ಪ ರಸ್ತೆ -30-35 ಮೀ. - 22.4-27 ಮೀ.
ಧನವಂತರಿರಸ್ತೆ -20-30 ಮೀ. - 5.8 ಮೀ- 12.6 ಮೀ.
ಡಬ್ಲ್ಯೂ.ಎಚ್. ಹನುಮಂತಪ್ಪರಸ್ತೆ - 8-10 ಮೀ.- 6- 7.6 ಮೀ.
ಗಾಂಧಿನಗರ ಸುತ್ತಮುತ್ತ - 5-10ಮೀ. - 6-9.6 ಮೀ.
 
 
Follow Us:
Download App:
  • android
  • ios