ಹೈದ್ರಾಬಾದ್ : ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು 12 ಶಾಸಕರು ಟಿಆರ್ ಎಸ್ ನೊಂದಿಗೆ ಸೇರಲು  ಸ್ಪೀಕರ್ ಭೇಟಿ ಮಾಡಿದ್ದಾರೆ. ಸ್ಪೀಕರ್ ಶ್ರೀನಿವಾಸ್ ರೆಡ್ಡಿ ಭೇಟಿ ಮಾಡಿದ ಅವರು ಆಡಳಿತ ಪಕ್ಷದೊಂದಿಗೆ ಸೇರಲು ಮನವಿ ಮಾಡಿದ್ದಾರೆ. 

119 ಸದಸ್ಯ ಸ್ಥಾನವುಳ್ಳ  ತೆಲಂಗಾಣ ಅಸೆಂಬ್ಲಿಯಲ್ಲಿ ಸದ್ಯ ಕಾಂಗ್ರೆಸ್ ಸ್ಥಾನಗಳು 18ಕ್ಕೆ ಇಳಿದಿವೆ.  ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ನಲಗೊಂಡ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ನಿಟ್ಟಿನಲ್ಲಿ 19 ಇದ್ದ ಸದಸ್ಯ ಸಂಖ್ಯೆ 18ಕ್ಕೆ ಇಳಿಕೆಯಾಗಿತ್ತು. ಇದೀಗ 12 ಕೈ ಶಾಸಕರು TRS ನೊಂದಿಗೆ ಸೇರಲು ಸಜ್ಜಾಗಿದ್ದಾರೆ. 

ತಂದೂರು ಕಾಂಗ್ರೆಸ್ ಶಾಸಕ ರೋಹಿತ್ ರೆಡ್ಡಿ, ಟಿಆರ್ ಎಸ್ ಅಧ್ಯಕ್ಷ ಹಾಗೂ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಪುತ್ರ ಕೆಟಿ ರಾಮರಾವ್ ಭೇಟಿ ಮಾಡಿ  ತಾವು ಆಡಳಿತ ಪಕ್ಷಕ್ಕೆ ನಿಷ್ಠರಾಗಿರುವುದಾಗಿ ಹೇಳಿದ್ದರು. ಇದೀಗ ಶಾಸಕರು ಸ್ಪೀಕರ್ ಭೇಟಿ ಮಾಡಿ ಆಡಳಿತ ಪಕ್ಷದೊಂದಿಗೆ ಸೇರಿ ಮುನ್ನಡೆಯಲು ನಿರ್ಧರಿಸಿದ್ದಾರೆ. 

ಕಳೆದ ಮಾರ್ಚ್ ತಿಂಗಳಲ್ಲೇ ಶಾಸಕರು ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದರು.  ಇದೀಗ 12 ಕಾಂಗ್ರೆಸ್ ಶಾಸಕರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಟಿಆರ್ ಎಸ್ ಜೊತೆ ಸೇರಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವೆಂಕಟ ರಮಣ ರೆಡ್ಡಿ ಹೇಳಿದ್ದಾರೆ.