ಮೊಹಾಲಿ(ಡಿ.02): 3 ಕೋಟಿ ಮೊತ್ತದ 2000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಮೊಹಾಲಿಯಲ್ಲಿ ಬಂಧಿಸಿದ್ದಾರೆ. ಬಂಧಿಸಿರುವ ಆರೋಪಿಗಳಲ್ಲಿ 21 ಅಭಿನವ್ ವರ್ಮಾ ಹಾಗೂ ಆತನ ಸಹೋದರಿ ವಿಶಾಕ ವರ್ಮಾ ಈ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು ಮುದ್ರಿಸಿದ ನಕಲಿ ನೋಟುಗಳನ್ನು ಹಳೆ ನೋಟುಗಳ ವಿನಿಮಯಕ್ಕೆ ಬಳಸುತ್ತಿದ್ದು, ಕಪ್ಪು ಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ಸಕ್ರಿಯರಾಗಿದ್ದರು ಎಂಬುವುದಾಗಿ ಪೊಲೀಸರು ತಿಳಿಸಿದ್ದಾರೆ. ಈವರೆಗೂ ಈ ಮೂವರು ಆರೋಪಿಗಳು 2 ಕೋಟಿ ಮೊತ್ತದ ಹಳೆ ನೋಟುಗಳನ್ನು ತಾವು ಮುದ್ರಿಸಿದ 2000 ರೂಪಾಯಿ ಮುಖಬೆಲೆಯ ನಕಲಿ ನೋಡಿನೊಂದಿಗೆ ವಿನಿಮಯ ಮಾಡಿರುವ ಸ್ಪೋಟಕ ಮಾಹಿತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಈ ದಂಧೆಯಲ್ಲಿ ಶೇಕಡಾ 30 ರಷ್ಟು ಕಮಿಷನ್ ಕೂಡಾ ಪಡೆಯುತ್ತಿದ್ದರಂತೆ ಈ ಕಿಲಾಡಿಗಳು.

ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳಲ್ಲಿ 21 ವರ್ಷದ ಅಭಿನವ್ ವರ್ಮಾ ಎಮ್ ಟೆಕ್ ವಿದ್ಯಾರ್ಥಿಯಾಗಿದ್ದು, ಈತನ ಪೋಷಕರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಿಂತಲೂ ಬೆಚ್ಚಿ ಬೀಳಿಸುವ ವಿಚಾರವೆಂದರೆ ಈತ ಪ್ರಧಾನಿ ಮೋದಿಯ ಕನಸಾಗಿದ್ದ 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ಯೋಜನೆಯ ಮೂಲಕ ಈತ 'ಅಂಧರಿಗಾಗಿ' ಅದ್ಭುತವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಆ ಮೂಲಕ ಅಂಧರು ಯಾರ ಸಹಾಯವೂ ಇಲ್ಲದೆ ಓಡಾಡಬಹುದಾಗಿತ್ತು.

ಈತನ ಈ ನೂತನ ಹಾಗೂ ನವೀನ ತಂತ್ರಜ್ಞಾನದಲ್ಲಿ ಅಂಧರಿಗಾಗೆಂದೇ ವಿಶೇಷ ಉಂಗುರವನ್ನು ರೂಪಿಸಿದ್ದು, ಇದನ್ನು ಧರಿಸಿ ಯಾವುದೇ ತೊಡಕಿಲ್ಲದೆ ಸಂಚರಿಸಬಹುದಾಗಿತ್ತು. ಈ ಉಂಗುರದಲ್ಲಿ ಅಭಿನವ್ ಸೆನ್ಸಾರ್ ಒಂದನ್ನು ಅಳವಡಿಸಿದ್ದು, ಅಂಧರ ದಾರಿಗೆ ತೊಡಕಾಗುವ ವಸ್ತುಗಳಿದ್ದಾಗ ಸೈರನ್ ಮಾಡುತ್ತಿತ್ತು.

ಈತನ ಈ ನೂತನ ತಂತ್ರಜ್ಞಾನ 'ಮೇಕ್ ಇನ್ ಇಂಡಿಯಾ'ಗಾಗಿ ಆಯ್ಕೆಯಾಗಿತ್ತು. ಅಲ್ಲದೇ ಈತ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ನಲ್ಲಿ ತನ್ನ ಹೆಸರು ನೋಂದಾಯಿಸಿಕೊಳ್ಳಲಿಚ್ಛಿಸಿದ್ದ.