ಬೆಂಗಳೂರು :  ಕೇಂದ್ರ ಜಲ ಆಯೋಗ ಅನುಮತಿ ನೀಡಿರುವ ಮೇಕೆದಾಟು ಯೋಜನೆಗೆ ತಡೆಯಾಜ್ಞೆ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಈ ಬಗ್ಗೆ ಸೂಕ್ತ ಹಾಗೂ ಎಚ್ಚರದ ಕಾನೂನು ಹೋರಾಟ ಮಾಡಲು, ಯೋಜನೆಯಿಂದ ಉಭಯ ರಾಜ್ಯಗಳಿಗೆ ಆಗುವ ಅನುಕೂಲವನ್ನು ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ಹಿತ ಕಾಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ತಮಿಳುನಾಡು ಹಾಗೂ ಕರ್ನಾಟಕ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ‘ಮೇಕೆದಾಟು ಯೋಜನೆ’ ಜತೆಗೆ ಕೃಷ್ಣಾ, ಮಹದಾಯಿ ಮತ್ತಿತರ ನದಿ ನೀರು ಬಳಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು, ಕಾನೂನು ಮತ್ತು ನೀರಾವರಿ ತಜ್ಞರೊಂದಿಗೆ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸಮಾಲೋಚನೆ ನಡೆಸಿದರು. ಈ ವೇಳೆ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಮೇಕೆದಾಟು ವಿಚಾರವಾಗಿ ಪ್ರಮುಖವಾಗಿ ಚರ್ಚೆ ನಡೆಯಿತು.

ಮೇಕೆದಾಟು ಯೋಜನೆಗೆ ಡಿಪಿಆರ್‌ ಸಿದ್ಧಪಡಿಸುವ ಬಗ್ಗೆ ಮುಂದುವರೆಯಲು ಕೇಂದ್ರ ಜಲ ಆಯೋಗವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ನಮ್ಮ ರಾಜ್ಯದ ಭೂಮಿಯಲ್ಲಿ ನಮ್ಮ ಪಾಲಿನ ನೀರಿಗೆ ಯೋಜನೆ ನಿರ್ಮಿಸುವುದು ರಾಜ್ಯದ ಹಕ್ಕು. ಇದನ್ನು ಕಸಿದುಕೊಳ್ಳಲು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಅಲ್ಲದೆ, ಯೋಜನೆಗೆ ಅನುಮತಿ ನೀಡಿದ ಕೇಂದ್ರ ನೀರಾವರಿ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌, ಆಯೋಗದ ಯೋಜನಾ ನಿರ್ದೇಶಕ ಎನ್‌. ಮುಖರ್ಜಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪು ಉಲ್ಲಂಘಿಸಿರುವುದಾಗಿ ಆರೋಪ ಮಾಡಿದೆ.

ಹೀಗಾಗಿ ರಾಜ್ಯದ ಹಿತ ಕಾಯಲು ಪ್ರಕರಣದಲ್ಲಿ ಎಚ್ಚರಿಕೆಯಿಂದ ಕಾನೂನು ಹೆಜ್ಜೆ ಇಡಬೇಕು. ನೆರೆ ರಾಜ್ಯವಾಗಿರುವ ಕಾರಣ ಯೋಜನೆಯಿಂದ ತಮಿಳುನಾಡಿಗೆ ಆಗುವ ಅನುಕೂಲಗಳನ್ನು ಗಮನಕ್ಕೆ ತರಬೇಕು. ತಮಿಳುನಾಡು ಹಾಗೂ ಕೇಂದ್ರ ಸರ್ಕಾರಕ್ಕೆ ಯೋಜನೆ ಬಗ್ಗೆ ವಿವರಣೆ ನೀಡಲು ರಾಜ್ಯ ಸರ್ಕಾರದಿಂದ ಅನುಮತಿ ಕೇಳಲಾಗಿದೆ. ಕೂಡಲೇ ಅನುಮತಿ ಪಡೆದು ಯೋಜನೆ ಬಗ್ಗೆ ವಿವರಣೆ ನೀಡಬೇಕು. ಇದೇ ವೇಳೆ ಕಾನೂನು ಹೋರಾಟವನ್ನೂ ಮುಂದುವರೆಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೃಷ್ಣಾ-ಮಹದಾಯಿ:

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನ್ಯಾಯಾಧಿಕರಣದ ತಡೆಯಾಜ್ಞೆ ಇದೆ. ತಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಬೇಕು. ಬಳಿಕ ಯೋಜನೆ ಎತ್ತರ ಹೆಚ್ಚಳಗೊಳಿಸುವುದು ಹಾಗೂ ಇದರಿಂದ ಮುಳುಗಡೆ ಆಗುವ ಹಳ್ಳಿಗಳಿಗೆ ಪುನರ್‌ವಸತಿ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಮಾತುಕತೆ ನಡೆಸಲಾಯಿತು. ಇದೇ ವೇಳೆ ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಮಾಡಿದ ಕೂಡಲೇ ಡಿಪಿಆರ್‌ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ಮಾಜಿ ಸಿಎಂಗಳ ಗೈರು:

ಮಾಜಿ ಮುಖ್ಯಮಂತ್ರಿಗಳ ಸಭೆಗೆ ಎಚ್‌.ಡಿ. ದೇವೇಗೌಡ, ಎಸ್‌.ಎಂ. ಕೃಷ್ಣ, ಸದಾನಂದಗೌಡ, ಬಿ.ಎಸ್‌. ಯಡಿಯೂರಪ್ಪ ಅವರು ಗೈರು ಹಾಜರಾಗಿದ್ದರು. ಈ ಬಗ್ಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಸಭೆಗೆ ಆಗಮಿಸುತ್ತಿಲ್ಲ ಎಂದು ಮೊದಲೇ ತಿಳಿಸಿದ್ದರು ಎಂದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್‌ಶೆಟ್ಟರ್‌, ಮಾಜಿ ಜಲಸಂಪನ್ಮೂಲ ಸಚಿವರಾದ ಅಲ್ಲಂ ವೀರಭದ್ರಪ್ಪ, ಕೆ.ಎಸ್‌. ಈಶ್ವರಪ್ಪ, ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಬಸವರಾಜ ಬೊಮ್ಮಾಯಿ ಹಾಜರಿದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆ ಎತ್ತರ ಹೆಚ್ಚಳದಿಂದ ಹಲವು ಹಳ್ಳಿಗಳು ಮುಳುಗಡೆ ಆಗಲಿವೆ. ಪುನರ್‌ವಸತಿಗೆ ಸರ್ಕಾರ ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ. ತೀರ್ಪಿನಂತೆ ಶೀಘ್ರ ಯೋಜನೆ ಜಾರಿಗೊಳಿಸಲಿ. ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ತೀರ್ಪು ಬಂದ ತಕ್ಷಣ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಆದರೆ ಸರ್ಕಾರ ತಡ ಮಾಡಿದೆ.

- ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ


ತಮಿಳುನಾಡು ಸರ್ಕಾರದಿಂದ ರಾಜಕೀಯ: ಸಿದ್ದರಾಮಯ್ಯ

ಮೇಕೆದಾಟು ಯೋಜನೆ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಆದರೂ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತಮಿಳುನಾಡು ಯೋಜನೆ ವಿರೋಧಿಸುತ್ತಿದೆ ಎಂದು ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಸುಪ್ರೀಂ ಕೋರ್ಟ್‌, ನ್ಯಾಯ ಮಂಡಳಿ ಆದೇಶಗಳು ರಾಜ್ಯ ಸರ್ಕಾರಕ್ಕೆ ಪೂರಕವಾಗಿವೆ. ಯೋಜನೆ ಬೇಡ ಎಂದು ಯಾವ ಆದೇಶದಲ್ಲೂ ಹೇಳಿಲ್ಲ. ಯೋಜನೆಗೆ ನಾವು ತಮಿಳು ನಾಡು ಸರ್ಕಾರದ ಒಪ್ಪಿಗೆ ಪಡೆಯುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.