ಸರ್ಕಾರಕ್ಕೆ ದೊರಕಿದ 3 ತಿಂಗಳ ಜೀವದಾನ

Tamil Nadu govt gets legal reprieve with split verdict
Highlights

ತಮಿಳುನಾಡಿನ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್‌) ಸರ್ಕಾರ ಸದ್ಯದ ಮಟ್ಟಿಗೆ ಬೀಸುವ ದೊಣ್ಣೆಯಿಂದ ಪಾರಾಗಿದೆ. ತಮ್ಮ ಬಣದ 18 ಶಾಸಕರ ಅನರ್ಹತೆ ಪ್ರಶ್ನಿಸಿ, ಅಣ್ಣಾ ಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್‌ ಬಣ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ನ ದ್ವಿದದಸ್ಯ ವಿಭಜಕ ತೀರ್ಪು ನೀಡಿದ್ದು, ಮೂರನೆಯ ನ್ಯಾಯಾಧೀಶರ ಹೆಗಲಿಗೆ ಇದನ್ನು ಇತ್ಯರ್ಥಗೊಳಿಸುವ ಜವಾಬ್ದಾರಿ ಹೋಗಿದೆ.

ಚೆನ್ನೈ:  ತಮಿಳುನಾಡಿನ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್‌) ಸರ್ಕಾರ ಸದ್ಯದ ಮಟ್ಟಿಗೆ ಬೀಸುವ ದೊಣ್ಣೆಯಿಂದ ಪಾರಾಗಿದೆ. ತಮ್ಮ ಬಣದ 18 ಶಾಸಕರ ಅನರ್ಹತೆ ಪ್ರಶ್ನಿಸಿ, ಅಣ್ಣಾ ಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್‌ ಬಣ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ನ ದ್ವಿದದಸ್ಯ ವಿಭಜಕ ತೀರ್ಪು ನೀಡಿದ್ದು, ಮೂರನೆಯ ನ್ಯಾಯಾಧೀಶರ ಹೆಗಲಿಗೆ ಇದನ್ನು ಇತ್ಯರ್ಥಗೊಳಿಸುವ ಜವಾಬ್ದಾರಿ ಹೋಗಿದೆ.

ಗುರುವಾರವೇ ಈ ಕುರಿತ ತೀರ್ಮಾನ ಪ್ರಕಟಗೊಂಡು ಪಳನಿಸ್ವಾಮಿ ಸರ್ಕಾರದ ಹಣೆಬರಹ ನಿರ್ಧಾರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 18 ಬಂಡಾಯ ಅಣ್ಣಾ ಡಿಎಂಕೆ ಶಾಸಕರನ್ನು ಅನರ್ಹಗೊಳಿಸಿ 2017ರಲ್ಲಿ ವಿಧಾನಸಭಾಧ್ಯಕ್ಷ ಪಿ. ಧನಪಾಲ್‌ ನೀಡಿದ ಆದೇಶ ಸರಿಯಾಗಿದೆ ಎಂದು ಮುಖ್ಯ ನ್ಯಾಯಾಧೀಶೆ ನ್ಯಾ. ಇಂದಿರಾ ಬ್ಯಾನರ್ಜಿ ತೀರ್ಪು ಪ್ರಕಟಿಸಿದರು. ಆದರೆ ಇದಕ್ಕೆ ಭಿನ್ನ ತೀರ್ಪು ಪ್ರಕಟಿಸಿದ ದ್ವಿಸದಸ್ಯ ಪೀಠದ ಇನ್ನೋರ್ವ ನ್ಯಾಯಾಧೀಶ ನ್ಯಾ. ಎಂ. ಸುಂದರ್‌ ಅವರು ಸ್ಪೀಕರ್‌ ಆದೇಶ ಸರಿಯಾದುದಲ್ಲ.

ಈ ಕುರಿತು ಮುಖ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ಗೌರವಪೂರ್ವಕವಾಗಿ ಒಪ್ಪುವುದಿಲ್ಲ ಎಂದರು.ಹೀಗಾಗಿ 1-1 ತೀರ್ಪು ಬಂದ ಕಾರಣ, ತಮ್ಮನ್ನು ಹೊರತುಪಡಿಸಿದ ಅತಿ ಹಿರಿಯ ನ್ಯಾಯಾಧೀಶರು (3ನೇ ನ್ಯಾಯಾಧೀಶ) ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿದ್ದಾರೆ ಎಂದು ಮುಖ್ಯ ನ್ಯಾಯಾಧೀಶೆ ನ್ಯಾ. ಇಂದಿರಾ ಘೋಷಿಸಿದರು.

ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿದರೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಕರ್ನಾಟಕ ಮೂಲದ ನ್ಯಾ. ಹುಲುವಾಡಿ ಜಿ. ರಮೇಶ್‌ ಅವರು ಅತಿ ಹಿರಿಯ ನ್ಯಾಯಾಧೀಶರಾಗಿದ್ದು, ಅವರೇ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ನಡುವೆ, ಸದ್ಯದಲ್ಲಿ ಕೋರ್ಟ್‌ಗೆ ರಜೆ ಇರುವ ಕಾರಣ ಪ್ರಕರಣದ ವಿಚಾರನೆ ಇನ್ನೂ 1-2 ತಿಂಗಳು ವಿಳಂಬವಾಗಬಹುದು ಎಂದೂ ಹೇಳಲಾಗಿದೆ.

ಏನಿದು ಪ್ರಕರಣ?:  ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ನಿಧನದ ತರುವಾಯ ಟಿಟಿವಿ ದಿನಕರನ್‌ ಬಣ ಬಂಡಾಯ ಎದ್ದಿತ್ತು. ಇದರಲ್ಲಿ 18 ಶಾಸಕರು ಗುರುತಿಸಿಕೊಂಡಿದ್ದರು. ಈ ಶಾಸಕರು ಪಳನಿಸ್ವಾಮಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಅವರನ್ನು ಸ್ಪೀಕರ್‌ ಧನಪಾಲ್‌ ಅವರು ಶಾಸಕರನ್ನು 2017ರ ಸೆಪ್ಟೆಂಬರ್‌ನಲ್ಲಿ ಅನರ್ಹಗೊಳಿಸಿದ್ದರು. ಒಂದು ವೇಳೆ ಇವರನ್ನು ಅನರ್ಹಗೊಳಿಸದೇ ಹೋದರೆ ಸರ್ಕಾರ ಅಲ್ಪಮತಕ್ಕಿಳಿದು ಪತನಗೊಳ್ಳುತ್ತಿತ್ತು. ಇದನ್ನು ಪ್ರಶ್ನಿಸಿ 18 ಶಾಸಕರು ಹೈಕೋರ್ಟ್‌ ಮೊರೆ ಹೋಗಿದ್ದರು.

loader