'ಟೈಂ ತಗೊಳ್ಳಿ, ಆದರೆ ಸಾಲ ಮನ್ನಾ ಯಾವಾಗ ಮಾಡ್ತೀನಿ ಅಂತ ಹೇಳಿ'

Take Your Own Time But Confirm When You Made Loan Wave Off Says B SriRamulu
Highlights

ರೈತರ ಸಾಲಮನ್ನಾ ನಿರ್ಧಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಸಮಯ ಕೇಳಿದ್ದಾರೆ. 15 ದಿನ ಯಾಕೆ? ಬೇಕಾದರೆ ಒಂದು ತಿಂಗಳು ಸಮಯ ತೆಗೆದುಕೊಳ್ಳಲಿ. ಆದರೆ ರೈತರ ಸಾಲ ಮನ್ನಾ ಎಂದು ಮಾಡುತ್ತಾರೆ ಎಂಬುದನ್ನು ಅವರು ನಾಡಿನ ಜನರಿಗೆ ಖಚಿತಪಡಿಸಲಿ ಎಂದು ಶಾಸಕ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.

ಬಳ್ಳಾರಿ[ಜೂನ್.01]: ರೈತರ ಸಾಲಮನ್ನಾ ನಿರ್ಧಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಸಮಯ ಕೇಳಿದ್ದಾರೆ. 15 ದಿನ ಯಾಕೆ? ಬೇಕಾದರೆ ಒಂದು ತಿಂಗಳು ಸಮಯ ತೆಗೆದುಕೊಳ್ಳಲಿ. ಆದರೆ ರೈತರ ಸಾಲ ಮನ್ನಾ ಎಂದು ಮಾಡುತ್ತಾರೆ ಎಂಬುದನ್ನು ಅವರು ನಾಡಿನ ಜನರಿಗೆ ಖಚಿತಪಡಿಸಲಿ ಎಂದು ಶಾಸಕ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುನ್ನ ಘೋಷಣೆ ಮಾಡಿದಂತೆ ಮುಖ್ಯಮಂತ್ರಿಗಳು ರೈತರ ಎಲ್ಲ ಸಾಲ ಮನ್ನಾ ಮಾಡಿ ಮಾತು ಉಳಿಸಿಕೊಳ್ಳಬೇಕು. ನುಡಿದಂತೆ ನಡೆಯಲಿ ಎಂಬುದಷ್ಟೇ ನಮ್ಮ ಒತ್ತಾಯ. ಸಂಕಷ್ಟದಲ್ಲಿರುವ ಕೃಷಿಕರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಕುಮಾರಸ್ವಾಮಿ ಅವರಿಗೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ಬಿಜೆಪಿಗೆ ರಾಜಕೀಯವಾಗಿ ಲಾಭವಾಗುತ್ತದೆ. ಆದರೆ, ರೈತರ ವಿಚಾರದಲ್ಲಿ ನಾವು ರಾಜಕೀಯ ಲಾಭ ಮಾಡಿಕೊಳ್ಳಲು ಸಿದ್ಧರಿಲ್ಲ. ಸಂಕಷ್ಟದಲ್ಲಿರುವ ಅನ್ನದಾತರು ಸಾಲಮುಕ್ತರಾಗಬೇಕು ಎಂಬ ಉದ್ದೇಶ ನಮ್ಮದು. ಒಂದು ವೇಳೆ ಅದಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಗೆದ್ದ ಮೇಲೆ ಷರತ್ತೇಕೆ?:

ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ರೂ. 8250 ಕೋಟಿಗಳಲ್ಲಿ ಕೇವಲ ರೂ 2000 ಕೋಟಿ ಮಾತ್ರ ಸಾಲಮನ್ನಾ ಮಾಡಿ 14 ಷರತ್ತು ವಿಧಿಸಿದ್ದರು. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲ ಷರತ್ತುಗಳ ಮೇಲೆ ಸಾಲಮನ್ನಾ ಮಾಡುವ ಕುರಿತು ಮಾತನಾಡುತ್ತಿದ್ದಾರೆ. ಚುನಾವಣೆ ಮುನ್ನ ಯಾವುದೇ ಷರತ್ತುಗಳು ಇರಲಿಲ್ಲ. ಗೆದ್ದು ಮುಖ್ಯಮಂತ್ರಿಯಾದ ಬಳಿಕ ಷರತ್ತುಗಳು ಏಕೆ ಎಂದು ಶ್ರೀರಾಮುಲು ಪ್ರಶ್ನಿಸಿದರು.

ಜೆಡಿಎಸ್‌ ಜತೆ ಹೋಗಲು ಕಾಂಗ್ರೆಸ್‌ ನಾಯಕರು ಸಿದ್ಧರಿಲ್ಲ. ಹೀಗಾಗಿಯೇ ಸಚಿವ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿದೆ. ಈ ಸರ್ಕಾರ ಉಳಿಯುವುದರ ಬಗ್ಗೆ ಕಾಂಗ್ರೆಸಿಗರಿಗೇ ಖಾತ್ರಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ

ಕೇಂದ್ರ ಸರ್ಕಾರ ಡಿ.ಕೆ. ಶಿವಕುಮಾರ್‌ ಅವರನ್ನು ಮಣಿಸಲು ಸಿಬಿಐ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ ಎಂಬುದು ನಿರಾಧಾರ. ಈ ಹಿಂದೆ ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಮಂತ್ರಿಯಾಗಿದ್ದರು. ಬಿಜೆಪಿ ನಾಯಕರ ಮೇಲೆ ದಾಳಿಗಳಾದವು. ಆದರೆ, ನಾವು ಈ ರೀತಿ ಆರೋಪ ಮಾಡಿರಲಿಲ್ಲ. ಜನಾರ್ದನ ರೆಡ್ಡಿ ಅವರ ಮನೆಯ ಮೇಲೆಯೂ ದಾಳಿಯಾಯಿತು. ತಮಗಾದ ಸಂಕಷ್ಟಕ್ಕೆ ಕೇಂದ್ರ ಸರ್ಕಾರ, ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಶ್ರೀರಾಮುಲು, ನನ್ನ ಮೇಲೆ ಭೂ ಒತ್ತುವರಿ ಪ್ರಕರಣವಿಲ್ಲ. ಒಂದು ವೇಳೆ ಇದ್ದರೆ ತನಿಖೆಗೆ ಸಿದ್ಧನಿದ್ದೇನೆ. ನಾನು ತಪ್ಪು ಮಾಡಿಲ್ಲವಾದ್ದರಿಂದ ನನಗೆ ಯಾವುದೇ ಆತಂಕವಿಲ್ಲ ಎಂದರು.

 

loader