ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳ ಮಧ್ಯೆ ಪೈಪೋಟಿ ಬಿರುಸುಗೊಂಡಿದ್ದು, ಈಗ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಪರವಾಗಿ ಸರ್ಕಾರದ ಮಟ್ಟದಲ್ಲಿ ನಾಡಿನ ಪ್ರಬಲ ಸಮುದಾಯದ ಸ್ವಾಮೀಜಿಯೊಬ್ಬರು ವಕಾಲತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಬೆಂಗಳೂರು: ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳ ಮಧ್ಯೆ ಪೈಪೋಟಿ ಬಿರುಸುಗೊಂಡಿದ್ದು, ಈಗ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಪರವಾಗಿ ಸರ್ಕಾರದ ಮಟ್ಟದಲ್ಲಿ ನಾಡಿನ ಪ್ರಬಲ ಸಮುದಾಯದ ಸ್ವಾಮೀಜಿಯೊಬ್ಬರು ವಕಾಲತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಕೆಲ ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಡಿಜಿಪಿ ಹುದ್ದೆ ವಿಷಯವಾಗಿ ಸ್ವಾಮೀಜಿ ಮಾತನಾಡಿದ್ದು, ಪೊಲೀಸ್ ಇಲಾಖೆಯ ಸರ್ವೋಚ್ಚ ಹುದ್ದೆಗೆ ಕನ್ನಡಿಗರನ್ನೇ ಪರಿಗಣಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಶಂಕರ ಬಿದರಿ ಅವರ ನಂತರ ಕನ್ನಡಿಗ ಅಧಿಕಾರಿಯೊಬ್ಬರಿಗೆ ಡಿಜಿ-ಐಜಿ ಹುದ್ದೆ ಪಡೆಯುವ ಅವಕಾಶ ಬಂದಿದೆ. ಈ ವೇಳೆ ಮೈಸೂರು ಜಿಲ್ಲೆಯವರೇ ಆದ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ ಅವರ ಸೇವಾ ಹಿರಿತನಕ್ಕೆ ಮಾನ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಧಾರ್ಮಿಕ ಗುರುಗಳು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿ ಅವರ ಬಳಿಕ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಹ, ಮುಖ್ಯಮಂತ್ರಿಗಳ ಅವರ ಮೇಲೆ ಕಿಶೋರ್ ಚಂದ್ರ ಲಾಬಿ ನಡೆಸಿದ್ದಾರೆ.

ಕಿಶೋರ್ ಅವರು 2019ರಲ್ಲಿ ನಿವೃತ್ತರಾಗಲಿದ್ದು, ಅವರಿಗೆ ಒಂದೂವರೆ ವರ್ಷಗಳು ಡಿಜಿಪಿ ಹುದ್ದೆ ಆಡಳಿತ ಸಿಗಲಿದೆ. ನಂತರ ಎಂ.ಎನ್.ರೆಡ್ಡಿ ಅವರಿಗೆ ಹುದ್ದೆ ನೀಡಬಹುದು ಎಂಬ ಅಭಿಪ್ರಾಯ ಸಹ ಕೆಲವರು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

(ಸಾಂದರ್ಭಿಕ ಚಿತ್ರ)