20 ಟನ್ ಮೇವು ಸಂಗ್ರಹ ಇದೆ. ಆದ್ರೆ ನಾವು ನೋಡಿದಾಗ ಅಲ್ಲಿ ಒಂದು ಹುಲ್ಲು ಕಡ್ಡಿಯೂ ಇರಲಿಲ್ಲ. ಆದ್ರೆ ಅಲ್ಲಿನ ರೈತರು ಮೇವಿಗಾಗಿ ಒದ್ದಾಡುತ್ತಿದ್ದಾರೆ. ಇದೇ ರೀತಿ ಬಳ್ಳಾರಿಯ ಶಿರಗುಪ್ಪದಲ್ಲಿ ಸ್ಥಾಪಿಸಿರೋ ಮೇವು ಬ್ಯಾಂಕಲ್ಲಿ ಮೇವು ತುಂಬಿ ಹೋಗಿದೆ, ಹಾಳಾಗ್ತಿದೆ. ಆದ್ರೆ ಈ ಮೇವು ಬ್ಯಾಂಕನ್ನು ರೈತರಿಗೆ ಹುಡುಕಲು ಸಾಧ್ಯವೇ ಇಲ್ಲದ ಜಾಗದಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ಅಲ್ಲಿ ಕೂಡ ರೈತರು ಒಂದು ಹುಲುಕಡ್ಡಿ ಮೇವನ್ನೂ ಖರೀದಿಸಿಲ್ಲ. ಇದೇ ಚಿತ್ರಣವನ್ನ ಶಿವಮೊಗ್ಗ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ಜಿಲ್ಲೆಗಳಲ್ಲಿ ಕಾಣ ಸಿಗುತ್ತಿದೆ.
ರಾಜ್ಯ ಬರದಿಂದ ತತ್ತರಿಸುತ್ತಿದೆ. ಆದರೆ ಈ ಬರ ನಮ್ಮ ರಾಜ್ಯದ ಭ್ರಷ್ಟರ ಪಾಲಿಗೆ ಮಾರಿಹಬ್ಬ ಆಗಿದೆ. ಯಾಕಂದ್ರೆ ಬರದಿಂದ ತತ್ತರಿಸೋ ಗೋವುಗಳಿಗೆ ಮೇವು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿರೋ ಸಾವಿರಾರು ಕೋಟಿ ಅನುದಾನವನ್ನ ಭ್ರಷ್ಟರು ನುಂಗಿ ನೀರು ಕುಡಿತ್ತಿದ್ದಾರೆ.
ಆ ಮೂಲಕ ರಾಜ್ಯದಲ್ಲಿ ಭಾರೀ ಮೇವು ಹಗರಣ ನಡೆಸುತ್ತಿದ್ದಾರೆ. ಅಂದು ಲಾಲೂ ಪ್ರಸಾದ್ ಯಾದವ್ ಮೇವು ಹಗರಣ ಮಾಡಿ ಬಿಹಾರದ ಮುಖ್ಯಮಂತ್ರಿ ಪಟ್ಟವನ್ನೇ ಕಳೆದುಕೊಂಡು ಕಂಬಿ ಎಣಿಸಿದ್ರು. ಆದ್ರೆ ನಮ್ಮ ರಾಜ್ಯದ ಕಂದಾಯ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾತ್ರ ಯಾರ ಭಯವೂ ಇಲ್ಲದೆ ಹಗಲು ದರೋಡೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ದಾಖಲೆ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದ ಕವರ್ಸ್ಟೋರಿ ತಂಡಕ್ಕೆ ಸಿಕ್ಕಿದೆ.
ಸತತವಾಗಿ ಆರು ವರ್ಷಗಳಿಂದ ಕರ್ನಾಟಕ ರಾಜ್ಯ ಬರಪೀಡಿತವಾಗಿರುತ್ತೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 139 ಹಾಗೂ ಹಿಂಗಾರು ಹಂಗಾಮಿನಲ್ಲಿ 160 ತಾಲ್ಲೂಕುಗಳನ್ನು ಬರಪೀಡಿತ ಅಂತ ಘೋಷಿಸಲಾಗಿದೆ. ಬರ ಬೇಗೆಯಿಂದ ರೈತರನ್ನ ಹಾಗೂ ಅವರ ಗೋಸಂಪತ್ತನ್ನ ಉಳಿಸುವ ಸಲುವಾಗಿ ಎಲ್ಲೆಲ್ಲಿ ಮೇವಿನ ಕೊರತೆ ಇದೆಯೋ ಅಲ್ಲೆಲ್ಲಾ ಸುಸಜ್ಜಿತ ಗೋಶಾಲೆಗಳು ಹಾಗೂ ಮೇವು ಬ್ಯಾಂಕುಗಳನ್ನ ಸ್ಥಾಪಿಸಲು ಸರ್ಕಾರ ಕಳೆದ ವರ್ಷದ ಅಂತ್ಯದಲ್ಲೇ ಆದೇಶ ನೀಡಿತ್ತು. ಆದೇಶವನ್ನ ಅನುಸರಿಸಿ ರಾಜ್ಯದಲ್ಲಿ 81 ಗೋಶಾಲೆ, 348 ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ ಅಂತ ಸರ್ಕಾರಿ ದಾಖಲೆಗಳು ಹೇಳ್ತಿವೆ. ಈ ಮೇವು ಬ್ಯಾಂಕ್ಗಳಲ್ಲಿ ಮೇವನ್ನ ಕೆ.ಜಿಗೆ 2 ರೂಪಾಯಿಯಂತೆ ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುತ್ತೆ. ಆದ್ರೆ ಈ ದಾಖಲೆಗಳ ಅಸಲಿಯತ್ತನ್ನ ಚೆಕ್ ಮಾಡಲು ಹೊರಟ ನಮ್ಮ ತಂಡಕ್ಕೆ ಶಾಕ್ ಕಾದಿತ್ತು.
ದಾಖಲೆಯಲ್ಲಿಮಾತ್ರಮೇವುಬ್ಯಾಂಕ್
ಸರ್ಕಾರಿ ದಾಖಲೆಯಲ್ಲಿರೋ ಅದೆಷ್ಟೋ ಮೇವು ಬ್ಯಾಂಕ್ಗಳು ವಾಸ್ತವವಾಗಿ ಇಲ್ಲವೇ ಇಲ್ಲ. ಇದಕ್ಕೆ ಒಳ್ಳೆ ಉದಾಹರಣೆ ಕೊಪ್ಪಳ ಜಿಲ್ಲೆ. ದಾಖಲೆಯಲ್ಲಿ ಇಲ್ಲಿ ಒಟ್ಟು 7 ಮೇವು ಬ್ಯಾಂಕ್ಗಳಿವೆ. ಆದರೆ ವಾಸ್ತವವಾಗಿ ಅವು ಕಾಣಕ್ಕೆ ಸಿಗಲ್ಲ. ಡಿಸೆಂಬರ್ನಲ್ಲೇ ಮೇವು ಬ್ಯಾಂಕ್ ಸ್ಥಾಪನೆಯಾಗಿದ್ರೂ ಇಲ್ಲಿನ ಯಾವ ಮೇವು ಬ್ಯಾಂಕಲ್ಲೂ ಒಂದೇ ಒಂದು ಗ್ರಾಂ ಮೇವು ಮಾರಾಟ ಆಗಿಲ್ಲ. ಯಾಕೆ ಹೀಗೆ ಅಂತ ಪಶುಸಂಗೋಪನಾ ಉಪನಿದೇರ್ಶಕ ರಂಗಯ್ಯರಲ್ಲಿ ಕೇಳಿದ್ರೆ ಅವರು ಹೇಳ್ತಾರೆ ರೈತರಿಗೆ ದುಡ್ಡು ಕೊಟ್ಟು ಮೇವು ಖರೀದಿಸಲು ಆಸಕ್ತಿ ಇಲ್ಲಾ ಅಂತ. ನಾವು ಇವರ ಹೇಳಿಕೆಯ ಸತ್ಯಾಸತ್ಯಯನ್ನ ಚೆಕ್ ಮಾಡಲು ಇಲ್ಲಿನ ಕೆಲ ಮೇವು ಬ್ಯಾಂಕ್ಗಳಿಗೆ ಭೇಟಿ ಕೊಟ್ಟಾಗ ನಮಗೆ ಅಚ್ಚರಿಯಾಯ್ತು. ಯಾಕಂದ್ರೆ ಕೊಪ್ಪಳದ ಬಂಡಿ ಹರ್ಲಾಪುರಲ್ಲಿರೋ ಮೇವು ಬ್ಯಾಂಕಿನ ಬಗ್ಗೆ ಅಲ್ಲಿನ ಸಿಬ್ಬಂದಿಗೇ ಮಾಹಿತಿ ಇಲ್ಲ. ಇನ್ನು ಅಕ್ಕಪಕ್ಕದ ರೈತರಲ್ಲಿ ಮೇವು ಬ್ಯಾಂಕ್ ಎಲ್ಲಿದೆ ಅಂತ ಕೇಳಿದ್ರೆ ಪಕ್ಕದ ಸಿಂಡಿಕೇಟ್ ಬ್ಯಾಂಕ್ ತೋರಿಸಿದ್ರು. ಅಂದ್ರೆ ಅಲ್ಲಿರುವ ಯಾವ ರೈತರಿಗೂ ಮೇವು ಬ್ಯಾಂಕಿನ ಬಗ್ಗೆ ಮಾಹಿತಿಯೇ ಇಲ್ಲ. ಇನ್ನು ಇದೇ ಜಿಲ್ಲೆಯ ಹಿರೆ ಸಿಂದೋಗಿಯ ಮೇವು ಬ್ಯಾಂಕಿಗೆ ಭೇಟಿ ಕೊಟ್ರೆ ಅಲ್ಲಿ ಮೇವು ಬ್ಯಾಂಕೇ ಇಲ್ಲ. ದಾಖಲೆ ಪ್ರಕಾರ ಇಲ್ಲಿ 20 ಟನ್ ಮೇವು ಸಂಗ್ರಹ ಇದೆ. ಆದ್ರೆ ನಾವು ನೋಡಿದಾಗ ಅಲ್ಲಿ ಒಂದು ಹುಲ್ಲು ಕಡ್ಡಿಯೂ ಇರಲಿಲ್ಲ. ಆದ್ರೆ ಅಲ್ಲಿನ ರೈತರು ಮೇವಿಗಾಗಿ ಒದ್ದಾಡುತ್ತಿದ್ದಾರೆ. ಇದೇ ರೀತಿ ಬಳ್ಳಾರಿಯ ಶಿರಗುಪ್ಪದಲ್ಲಿ ಸ್ಥಾಪಿಸಿರೋ ಮೇವು ಬ್ಯಾಂಕಲ್ಲಿ ಮೇವು ತುಂಬಿ ಹೋಗಿದೆ, ಹಾಳಾಗ್ತಿದೆ. ಆದ್ರೆ ಈ ಮೇವು ಬ್ಯಾಂಕನ್ನು ರೈತರಿಗೆ ಹುಡುಕಲು ಸಾಧ್ಯವೇ ಇಲ್ಲದ ಜಾಗದಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ಅಲ್ಲಿ ಕೂಡ ರೈತರು ಒಂದು ಹುಲುಕಡ್ಡಿ ಮೇವನ್ನೂ ಖರೀದಿಸಿಲ್ಲ. ಇದೇ ಚಿತ್ರಣವನ್ನ ಶಿವಮೊಗ್ಗ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ಜಿಲ್ಲೆಗಳಲ್ಲಿ ಕಾಣ ಸಿಗುತ್ತಿದೆ. ಇನ್ನೊಂದು ವಿಚಾರ ಅಂದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲಾ ಭಾಗ್ಯ ಯೋಜನೆಗಳ ಬಗ್ಗೆ ಭಾರೀ ಪ್ರಚಾರ ಮಾಡುತ್ತಿದೆ. ಕಂಡ ಕಂಡಲ್ಲಿ ಜಾಹಿರಾತು ಫಲಕ ಹಾಕಿದೆ. ಆದ್ರೆ ಮೇವು ಭಾಗ್ಯದ ಬಗ್ಗೆ ಜಾಹಿರಾತು ಬಿಡಿ, ಒಂದೇ ಒಂದು ಸಂದೇಶವಾಗಲಿ ಮುಖ್ಯಮಂತ್ರಿಗಳಿಂದ ಸಚಿವರಿಂದ ಹೇಳಿಕೆಗಳಾಗಲೀ ಇಲ್ಲ. ಯಾಕೆ? ಹಗರಣ ಮಾಡುವ ಸಲುವಾಗಿಯೇ ಈ ಮೌನ ಧೋರಣೆಯಾ?
ಗೋಶಾಲೆಯಲ್ಲಶೋಷಣಾಶಾಲೆ
ಇನ್ನುಮೇವು ಬ್ಯಾಂಕ್ಗಳಲ್ಲಿ ಮೇವು ಖರೀದಿಸಲೂ ಶಕ್ತಿ ಇಲ್ಲದ ರೈತರ ಗೋಸಂಪತ್ತು ಉಳಿಸಲು ಗೋಶಾಲೆಗಳನ್ನ ಸ್ಥಾಪಿಸಲಾಗಿದೆ. ಈ ಗೋಶಾಲೆಗಳು ಶೋಷಣಾ ಶಾಲೆಗಳಾಗಿವೆ. ಇಲ್ಲಿ ರೈತರನ್ನ ಭಿಕ್ಷುಕರಿಗಿಂತ ಕಡೆಯಾಗಿ ಕಾಣಲಾಗುತ್ತಿದೆ. ಮೇವು ಕೇಳೋದು ರೈತರ ಹಕ್ಕು ಅಂತ ಹೇಳದೆ ಅದನ್ನ ರೈತರಿಗೆ ಭಿಕ್ಷೆ ಥರಾ ನೀಡಲಾಗುತ್ತಿದೆ. ಈ ಗೋಶಾಲೆಗಳಲ್ಲಿ ಸರ್ಕಾರಿ ಆದೇಶದಂತೆ ಒಂದು ದನಕ್ಕೆ 5-7 ಕೆ.ಜಿ ಮೇವನ್ನ ನೀಡಲಾಗುತ್ತಿಲ್ಲ. ಎಷ್ಟೋ ಗೋಶಾಲೆಗಳಲ್ಲಿ ನೆರಳಿನ ವ್ಯವಸ್ಥೆಯೇ ಮಾಡಲಾಗಿಲ್ಲ. ಶುದ್ಧ ನೀರು ಕೇಳುವ ಹಾಗೆಯೇ ಇಲ್ಲ. ಅಷ್ಟೇ ಅಲ್ಲ ತಿಂಗಳಲ್ಲಿ 12-15 ದಿನ ಮೇವು ಕೂಡ ಕೊಡದ ಉದಾಹರಣೆ ಸಾಕಷ್ಟು ಗೋಶಾಲೆಗಲ್ಲಿ ಸಿಗುತ್ತೆ. ಇನ್ನು ಚಿತ್ರದುರ್ಗ ಜಿಲ್ಲೆಯ ರಾಂಪುರ ಗೋಶಾಲೆಯಲ್ಲಿ ರೈತರನ್ನು ಇನ್ನಿಲ್ಲದಂತೆ ಶೋಷಿಸಲಾಗುತ್ತಿದೆ. ಇಲ್ಲಿ ರೈತರಿಗೆ ಬರೀ 2 ಕೆ.ಜಿ ಧೂಳಿನಂಥಾ ಮೇವು ನೀಡಲಾಗುತ್ತಿದೆ. ಆ ಮೇವನ್ನು ಗೋವುಗಳು ತಿನ್ನುತ್ತಿಲ್ಲ. ಯಾಕಂದ್ರೆ ಮೇವನ್ನ ಉಪ್ಪಿನಂಶದಿಂದ ಟ್ರೀಟ್ ಮಾಡಿ ಕೊಡುತ್ತಿಲ್ಲ. ಇನ್ನು ಈ ಗೋಶಾಲೆಯಲ್ಲಿ ಬಿಸಿಲಿನ ರಕ್ಷಣೆಗೆ ಮೇಲ್ಛಾವಣಿಯೂ ಇಲ್ಲ. ಗೋವುಗಳು ಬಿಸಿಲಿನ ಝಳಕ್ಕೆ ಒದ್ದಾಡುತ್ತಿವೆ. ನಾವು ವರದಿಗಾರಿಕೆಗೆ ಹೋದ ದಿನವೇ ಒಂದು ಎಮ್ಮೆ ಸಾವನ್ನಪ್ಪಿತ್ತು. ಇಲ್ಲಿ ಯಾವ ಸಿಬ್ಬಂದಿಯೂ ಇಲ್ಲ. ರೈತರಿಕೆ ರಕ್ಷಣೆಯೂ ಇಲ್ಲ.
ಗೆಟ್..ಸೆಟ್..ಗೋ: ನಮ್ಮ ನಾಡಿನ ಅನ್ನದಾತನನ್ನ ಅಧಿಕಾರಿಗಳು ಯಾವ ರೀತಿ ಶೋಷಿಸುತ್ತಾರೆ ಅನ್ನೋದಕ್ಕೆ ಇನ್ನೊಂದು ಸಾಕ್ಷಿ ನಮಗೆ ಚಿತ್ರದುರ್ಗದ ದೊಡ್ಡ ಉಳ್ಳಾರ್ತಿಯಲ್ಲಿ ಸಿಕ್ತು. ಇಲ್ಲಿ ಅಧಿಕಾರಿಗಳು ರೈತರಿಗೆ ಬೇಕಾದಷ್ಟು ಮೇವು ಖರೀದಿಸಿಲ್ಲ. ಅಲ್ಲದೆ ರೈತರಿಗೆ ಶಿಸ್ತಾಗಿ ಮೇವನ್ನೂ ವಿತರಿಸುತ್ತಿಲ್ಲ. ಬದಲಾಗಿ ಖರೀದಿಸಿದ 2 ಲೋಡು ಮೇವನ್ನು ಒಂದು ಕಡೆ ಗುಡ್ಡೆ ಹಾಕಿ ಮೂರೂವರೆ ಸಾವಿರ ಗೋವಿನ ಮಾಲೀಕರನ್ನ ರೇಸಿಗೆ ನಿಲ್ಲಿಸುವ ರೀತಿ ನಿಲ್ಲಿಸಿ ಓಡಿಸ್ತಾರಂತೆ. ರೈತರು ಓಡಿ ಹೋಗಿ ತಮಗೆ ಎಷ್ಟು ಆಗುತ್ತೋ ಅಷ್ಟು ಮೇವನ್ನ ಸಂಗ್ರಹಿಸಿ ತಮ್ಮ ಗೋವುಗಳಿಗೆ ಹಾಕಬೇಕಂತೆ. ಯಾರಿಗೆ ಶಕ್ತಿ ಇಲ್ಲವೋ ಅವರ ದನಕರುಗಳು ಆವತ್ತು ಉಪವಾಸ ಸಾಯಬೇಕಂತೆ. ಈ ರೀತಿ ಒಂದು ತಿಂಗಳು ರೈತರಿಗೆ ಮೇವು ಹಂಚಿದ್ದಾರಂತೆ. ಇದಕ್ಕೆ ಪೂರಕವಾಗಿ ದೃಶ್ಯ ಸಾಕ್ಷಿಯೂ ನಮ್ಮ ಬಳಿ ಇದೆ.
ಮಾದರಿತೋರಿಸಿಮೋಸ
ಕಂದಾಯ ಹಾಗೂ ಪಶುಸಂಗೋಪನಾ ಅಧಿಕಾರಿಗಳು ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೆ ಮೋಸ ಮಾಡ್ತಿದ್ದಾರೆ. ಮುಖ್ಯಮಂತ್ರಿಗಳು, ಸಚಿವರು ಗೋಶಾಲೆಗೆ ಭೇಟಿ ಕೊಟ್ಟಾಗ ಸುಸಜ್ಜಿತವಾದ ಎಲ್ಲಾ ವ್ಯವಸ್ಥೆ ಇರೋ ಒಂದು ಗೋಶಾಲೆ ತೋರಿಸಿ ಮೋಸ ಮಾಡ್ತಿದ್ದಾರೆ. ಇದಕ್ಕೆ ಒಳ್ಳೆ ಉದಾರಣೆ ಚಿತ್ರದುರ್ಗ ಜಿಲ್ಲೆಯ ಮುತ್ತುಗಾನಗಳ್ಳಿ. ಈ ಗೋಶಾಲೆ ಸೂಪರ್ ಆಗಿದೆ. ಇಲ್ಲಿನ ಒಂದೇ ಗೋಶಾಲೆಯಲ್ಲಿ 70 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಬಗೆಬಗೆಯ ಹಸಿ, ಒಣ, ಪುಡಿ ಮೇವುಗಳು ಇಲ್ಲಿವೆ. ಆದ್ರೆ ಈ ಜಿಲ್ಲೆಯ ಬೇರೆ ಯಾವ ಗೋಶಾಲೆಯಲ್ಲೂ ಇಂಥಾ ಸೌಲಭ್ಯ ಇಲ್ಲ. ಯಾಕೆ? ಇದು ಅಧಿಕಾರಿಗಳು ಮಾಡುತ್ತಿರೋ ಕಣ್ಕಟ್ಟಲ್ವೇ?
ಸುಳ್ಳುಅಂಕಿಅಂಶ
ಇನ್ನು ಕಂದಾಯ ಹಾಗೂ ಪಶುಸಂಗೋಪನಾ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಸುಳ್ಳು ಅಂಕಿ ಅಂಶ ನೀಡುತ್ತಿದ್ದಾರೆ. ದಾಖಲೆಯಲ್ಲಿ ಒಂದು ಲೆಕ್ಕ ಇದ್ರೆ ವಾಸ್ತವವಾಗಿ ದನಕರುಗಳ ಲೆಕ್ಕವೇ ಬೇರೆ ಇರುತ್ತೆ. ಇದಕ್ಕೆ ಒಳ್ಳೆ ಉದಾಹರಣೆ ಕೊಪ್ಪಳದ ಅಳವಂಡಿ ಗೋಶಾಲೆ. ಇಲ್ಲಿ 23-01-17 ರಂದು 16,011 ಹಸುಗಳು ಇದ್ದವು ಅಂತ ಮಾಹಿತಿ ಹಕ್ಕಿನಡಿ ಕೇಳಿದ ದಾಖಲೆ ಹೇಳುತ್ತೆ. ಆದ್ರೆ ನಾವು ಆ ಗೋಶಾಲೆಗೆ ಹೋಗಿ ಅಲ್ಲಿದ್ದ ರಿಜಿಸ್ಟರ್ ಚೆಕ್ ಮಾಡಿದಾಗ ಅಂದು ಇದ್ದಿದ್ದು ಬರೀ 78 ಗೋವುಗಳು. ಎಂಥಾ ವ್ಯತ್ಯಾಸ ಅಲ್ವಾ? ಇದೇ ರೀತಿಯ ವ್ಯತ್ಯಾಸ ದೊಡ್ಡ ಉಳ್ಳಾರ್ತಿಯಲ್ಲೂ ಕಂಡು ಬಂತು. ಇಂಥಾ ತಪ್ಪು ತಪ್ಪು ಲೆಕ್ಕ ಇಡೀ ರಾಜ್ಯದಲ್ಲಿ ಕಂಡು ಬರುತ್ತಿದೆ. ಅಷ್ಟೇ ಅಲ್ಲ ಕಂದಾಯ ಇಲಾಖೆಯವರು ಮೇವು, ಗೋವಿನ ಲೆಕ್ಕ ಒಂದು ಕೊಟ್ರೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಲೆಕ್ಕವೇ ಬೇರೆ ಇರುತ್ತೆ. ಈ ರೀತಿ ತಪ್ಪು ಲೆಕ್ಕ ತೋರಿಸಿ ಕೋಟಿ ಕೋಟಿ ಲೂಟಿ ಹೊಡೀತ್ತಿದ್ದಾರೆ ಭ್ರಷ್ಟರು.
ನಿಯಮಗಳುಕಾಲಕಸ
ಗೋಶಾಲೆ ನಿರ್ವಹಣೆಯ ಜವಾಬ್ದಾರಿ ಕಂದಾಯ ಇಲಾಖೆಯದ್ದಾದ್ರೆ, ಮೇವು ನೀರು ಪೂರೈಕೆಯ ಜವಾಬ್ದಾರಿ ಪಶುಸಂಗೋಪನಾ ಇಲಾಖೆಯದ್ದು. ಆದ್ರೆ ಈ ಇಲಾಖೆಯ ಅಧಿಕಾರಿಗಳು ಮೇವು ಖರೀದಿಯಿಂದ ಹಿಡಿದು, ಮೂಲಭೂತ ಸೌಕರ್ಯ ಕೊಡುವವರೆಗೆ ಪ್ರತಿಯೊಂದರಲ್ಲೂ ಭಾರೀ ಮೋಸ ಮಾಡುತ್ತಿದ್ದಾರೆ. ಗುಣಮಟ್ಟದ ಮೇವು ಖರೀದಿಸಲ್ಲ. ಮೇವಿನ ಗುಣಮಟ್ಟ ಚೆಕ್ಕ ಮಾಡಲ್ಲ. ಒಂದು ಲೋಡು ಮೇವು ಖರೀದಿಸಿ ಮೂರು ನಾಲ್ಕ ಲೋಡಿನ ಲೆಕ್ಕ ತೋರಿಸುತ್ತಾರೆ. ಹಸಿ ಮೇವು ತಂದು ಒಣ ಮೇವು ಲೆಕ್ಕ ತೋರಿಸ್ತಾರೆ. ರೈತರಿಗೆ ಮೂರು ನಾಲ್ಕು ಕೆ.ಜಿ ಮೇವು ಕೊಟ್ಟು 7 ಕೆ.ಜಿ ಲೆಕ್ಕ ಕೊಡ್ತಾರೆ. ಹೀಗೆ ತಹಶೀಲ್ದಾರಿಂದ ಹಿಡಿದು ಜಿಲ್ಲಾಧಿಕಾರಿ ವರೆಗೆ ಪ್ರತಿಯೊಬ್ಬರು ಈ ಭಾರೀ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಹಗರಣದ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ದಾಖಲೆಗಳನ್ನ ಪರಿಶೀಲಿಸಿ ಗೋಲ್ಮಾಲ್ ಮಾಡುತ್ತಿರೋ ಅಧಿಕಾರಿಗಳನ್ನ ಪರ್ಮನೆಂಟಾಗಿ ಮನೆಗೆ ಕಳುಹಿಸಬೇಕು. ಮೇವು ತಿಂದು ಕೊಬ್ಬಿದ ಅಧಿಕಾರಗಳಿಗೆ ತಕ್ಕ ಪಾಠ ಕಲಿಸಬೇಕು. ಇನ್ನು ರೈತರು ಮೇವು ಪಡೆಯೋದು ತಮ್ಮ ಹಕ್ಕು ಅಂತ ತಿಳಿಯಬೇಕು. ಭಿಕ್ಷುಕರಂತೆ ವರ್ತಿಸದೆ, ಸ್ವಾಭಿಮಾನದಿಂದ ತಮ್ಮ ಹಕ್ಕನ್ನು ಕೇಳಬೇಕು. ಯಾಕಂದ್ರೆ ಮೇವು ಜನರ ತೆರಿಗೆ ಹಣದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ.
ಇಂಥಾ ಮೋಸ ಇಡೀ ರಾಜ್ಯಾದ್ಯಂತ ನಡೀತಾ ಇದೆ. ಈ ಬಾರೀ ಹಗರಣವನ್ನು ತಕ್ಷಣ ತನಿಖೆ ಮಾಡಬೇಕು. ಆಗ ಈ ಮೇವು ಹಗರಣದ ಅಸಲಿಯತ್ತು ಬಯಲಾಗುತ್ತೆ.
ವರದಿ: ವಿಜಯಲಕ್ಷ್ಮಿ ಶಿಬರೂರು
