ನವದೆಹಲಿ[ಜೂ.20]: ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ (67) ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್(76) ರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದು ಎಂಬ ಊಹಾಪೋಹಗಳಿಗೆ ಮಂಗಳವಾರ ತೆರೆ ಬಿದ್ದಿದೆ.

ಸುಷ್ಮಾ ಸ್ವರಾಜ್ ಅವರು ಮಾಜಿ ಸಂಸದೆ ಎಂಬ ಗುರುತಿನ ಚೀಟಿ ಪಡೆಯಲು ಅರ್ಜಿ ಹಾಕಿದ್ದರೆ, ಸುಮಿತ್ರಾ ಮಹಾಜನ್‌ಗೆ ಈ ಕುರಿತ ಗುರುತಿನ ಚೀಟಿ ಮಂಗಳವಾರ ಸಿಕ್ಕಿದೆ. ಹೀಗಾಗಿ ಇಬ್ಬರ ಲೋಕಸಭೆ ಅಥವಾ ರಾಜ್ಯಸಭೆ ಇನಿಂಗ್ಸ್ ಮುಕ್ತಾಯವಾದಂತೆ ಆಗಿದೆ.

ಅನಾರೋಗ್ಯದ ಕಾರಣ ನೀಡಿ ಸುಷ್ಮಾ ಸ್ವರಾಜ್ ಲೋಕಸಭೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿದ್ದರು. ಇನ್ನು ವಯಸ್ಸಿನ ಕಾರಣ ನೀಡಿ, 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಮಿತ್ರಾ ಮಹಾಜನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ, ಸಚಿವ ಸ್ಥಾನ ನೀಡುವ ಕುರಿತು ಊಹಾಪೋಹಗಳಿದ್ದವು. ಆದರೆ ಇದೀಗ ಇಬ್ಬರೂ ಮಾಜಿ ಸಂಸದರು ಪಡೆಯುವ ಕಾರ್ಡ್‌ಗೆ ಮೊರೆ ಹೋದ ಕಾರಣ, ಅಂಥ ಸಾಧ್ಯತೆ ಇಲ್ಲ.

ಆದರೆ ಶೀಘ್ರವೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆ ಖಾಲಿಯಾಗಲಿದ್ದು, ಆ ಹುದ್ದೆಗೆ ಇಬ್ಬರನ್ನೂ ನೇಮಕ ಮಾಡಿದರೂ ಅಚ್ಚರಿ ಇಲ್ಲ.