Asianet Suvarna News Asianet Suvarna News

ಬಿಸಿಸಿಐ ಸೂಪರ್ ಸೀಡ್‌ನ ಸುಳಿವು?

 ಸ್ವಚ್ಛ ಹಾಗೂ ಪಾರದರ್ಶಕ ಕ್ರಿಕೆಟ್ ಆಡಳಿತಕ್ಕಾಗಿ ನ್ಯಾ. ಲೋಧಾ ಸಮಿತಿ ಸಲ್ಲಿಸಿದ್ದ ಶಿಫಾರಸುಗಳ ಅನುಷ್ಠಾನ ವಿಚಾರದಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಒದಗಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಕಾನೂನು ಕುಣಿಕೆಗೆ ಸಿಲುಕಿದ್ದಾರೆ.

Supreme Court slams BCCI president Anurag Thakur says he may land in jail if perjury is proved

ನವದೆಹಲಿ (ಡಿ.15): ಸ್ವಚ್ಛ ಹಾಗೂ ಪಾರದರ್ಶಕ ಕ್ರಿಕೆಟ್ ಆಡಳಿತಕ್ಕಾಗಿ ನ್ಯಾ. ಲೋಧಾ ಸಮಿತಿ ಸಲ್ಲಿಸಿದ್ದ ಶಿಫಾರಸುಗಳ ಅನುಷ್ಠಾನ ವಿಚಾರದಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಒದಗಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಕಾನೂನು ಕುಣಿಕೆಗೆ ಸಿಲುಕಿದ್ದಾರೆ.

ಈ ತಿಂಗಳೊಂದರಲ್ಲೇ ನಾಲ್ಕನೇ ಬಾರಿಗೆ ಮುಂದೂಡಲ್ಪಟ್ಟಿದ್ದ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣದ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಪೀಠ, ಬಿಸಿಸಿಐ ಅಧ್ಯಕ್ಷರ ವಿರುದ್ಧ ಸುಳ್ಳು ಸಾಕ್ಷ್ಯ ಮೊಕದ್ದಮೆಯನ್ನು ದಾಖಲಿಸಬಹುದಲ್ಲವೇ ಎಂದದ್ದಲ್ಲದೆ, ಶಿಾರಸು ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಿಸಿಸಿಐ ಸೇರಿದಂತೆ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳನ್ನು ವಜಾಗೊಳಿಸಬೇಕೆಂದು ಲೋಧಾ ಸಮಿತಿ ಮಾಡಿರುವ ಮನವಿ ಕುರಿತ ತೀರ್ಪನ್ನು ಜನವರಿ 3 ಕ್ಕೆ ಕಾಯ್ದಿರಿಸಿತು.

ಕ್ಷಮೆ ಕೋರದೆ ಗತ್ಯಂತರವಿಲ್ಲ

ವಿಚಾರಣೆಯ ಸಂದರ್ಭಲ್ಲಿ ಪ್ರಕರಣದ ಸಂಧಾನಕಾರರಾಗಿ ನಿಯುಕ್ತಿಯಾಗಿರುವ ಗೋಪಾಲ ಸುಬ್ರಹ್ಮಣ್ಯಂ, ಠಾಕೂರ್ ಹಾಗೂ ಕ್ರಿಕೆಟ್ ಅಭಿವೃದ್ಧಿ ಸಮಿತಿಯ ಪ್ರಧಾನ ನಿರ್ವಾಹಕ ರತ್ನಾಕರ್ ಶೆಟ್ಟಿ ಅವರಿಂದ ಸುಳ್ಳು ಪ್ರಮಾಣಪತ್ರ ಸಲ್ಲಿಕೆಯಾಗಿದೆ ಎಂದು ಅರುಹಿದರು. ಮಾತ್ರವಲ್ಲದೆ, ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನ ವಿಚಾರದ ಪ್ರತಿಯೊಂದು ಹಂತದಲ್ಲಿಯೂ ಠಾಕೂರ್ ಅವರಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಇದೆ ಎಂದು ಹೇಳಿದರು. ‘‘ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್‌ಗೆ ಬರೆದಿರುವ ಪತ್ರದಲ್ಲಿ ಬಿಸಿಸಿಐ ಅಧ್ಯಕ್ಷರಿಂದ ಸುಳ್ಳು ಸಾಕ್ಷ್ಯ ದಾಖಲಾಗಿರುವುದು ಮೇಲ್ನೋಟಕ್ಕೆ ಋಜುವಾದಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಂದೊಮ್ಮೆ ನ್ಯಾಯಾಲಯ ತೀರ್ಪು ನೀಡಿದ ನಂತರವೂ ಮನೋಹರ್ ಅವರನ್ನು ಸಂಪರ್ಕಿಸುವುದು ಹೇಗೆ ಸಾಧ್ಯ?’’ ಎಂದು ಪ್ರಶ್ನಿಸಿದ ನ್ಯಾಯಪೀಠ, ಬಿಸಿಸಿಐ ಪರ ವಕೀಲ ಕಪಿಲ್ ಸಿಬಲ್ ಅವರಿಗೆ, ‘‘ಠಾಕೂರ್ ಕ್ಷಮೆ ಕೋರದ ಹೊರತು ಈ ಸುಳಿಯಿಂದ ತಪ್ಪಿಸಿಕೊಳ್ಳಲಂತೂ ಕಷ್ಟಸಾಧ್ಯಎಂದಿತು.

ಸುಳ್ಳು ಸಾಕ್ಷ್ಯದ ಸುತ್ತ ಮುತ್ತ

ಲೋಧಾ ಸಮಿತಿಯ ವರದಿ ಅನುಷ್ಠಾನ ವಿಚಾರದಲ್ಲಿ ಜುಲೈ 18 ರಂದು ನ್ಯಾಯಾಲಯ ನೀಡಿರುವ ತೀರ್ಪಿಗೆ ಬಿಸಿಸಿಐ ಬೇಷರತ್ ಬದ್ಧವಾಗಿರಬೇಕೆಂದು ಅಕ್ಟೋಬರ್ 21 ರಂದು ಪುನರುಚ್ಚರಿಸಿದ್ದ ಸುಪ್ರೀಂ ಕೋರ್ಟ್, ಲೋಧಾ ಸಮಿತಿ ಶಿಾರಸುಗಳನ್ನು ಜಾರಿಗೆ ತರಲು ಎಷ್ಟು ಕಾಲಾವಧಿ ಬೇಕಾಗುತ್ತದೆ ಎಂಬುದನ್ನು ಡಿ.3 ರೊಳಗೆ ಲೋಧಾ ಸಮಿತಿಗೆ ಹಾಗೂ ನ್ಯಾಯಾಲಯಕ್ಕೆ ಖುದ್ದು ಅಫಿಡವಿಟ್ ಸಲ್ಲಿಸಬೇಕೆಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ‌್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಸೂಚಿಸಿತ್ತು. ಆದರೆ, ಲೋಧಾ ಸಮಿತಿ ಬಿಸಿಸಿಐಗೆ ಲೆಕ್ಕ ಪರಿಶೋಧಕರನ್ನು ನೇಮಿಸಬೇಕೆಂದು ಸೂಚಿಸಿದ್ದು, ಇದು ಮಂಡಳಿಯ ಕಾರ‌್ಯಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವಾಗುವುದಿಲ್ಲವೇ ಎಂಬುದರ ಬಗ್ಗೆ ಅನುರಾಗ್ ಠಾಕೂರ್ ಐಸಿಸಿ ಮುಖ್ಯಸ್ಥರಿಂದ ಪತ್ರ ಕೋರಿದ್ದರು. ಆದರೆ, ಈ ಕುರಿತು ತಾನು ಶಶಾಂಕ್ ಅವರಿಂದ ಪತ್ರವನ್ನೇನೂ ಕೇಳಿರಲಿಲ್ಲ ಕೇವಲ ಸಲಹೆಯನ್ನಷ್ಟೇ ಕೇಳಿದ್ದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದರು.

ಪಿಳ್ಳೆ ನೇಮಕಕ್ಕೆ ವಿರೋಧ

ಶಿಫಾರಸು ಅನುಷ್ಠಾನ ವಿಷಯದಲ್ಲಿ ಹಠ ಬಿಡದ ಬಿಸಿಸಿಐ ಪದಾಧಿಕಾರಿಗಳನ್ನು ವಜಾಗೊಳಿಸಿ ಬಿಸಿಸಿಐ ಆಡಳಿತ ಚಟುವಟಿಕೆಗಳನ್ನು ನೋಡಿಕೊಳ್ಳಲು ಮಾಜಿ ಗೃಹ ಕಾರ‌್ಯದರ್ಶಿ ಜಿ.ಕೆ. ಪಿಳ್ಳೆ ಅವರನ್ನು ನೇಮಿಸಲು ನ್ಯಾಯಾಲಯ ಆದೇಶಿಸಬೇಕೆಂಬ ನ್ಯಾ. ಲೋಧಾ ಸಮಿತಿಯ ಮನವಿಗೆ ಬಿಸಿಸಿಐ ವಿರೋ‘ ವ್ಯಕ್ತಪಡಿಸಿತು. ಸಮಿತಿ ಪ್ರಸ್ತಾಪಿಸಿರುವ ವ್ಯಕ್ತಿಯನ್ನು ಬೇಡವೆಂದು ಹೇಳುವುದಾದರೆ, ಸೂಕ್ತ ಅಭ್ಯರ್ಥಿಗಳನ್ನು ಮುಂದಿನ ಒಂದು ವಾರದೊಳಗೆ ಸೂಚಿಸಬೇಕೆಂದು ನ್ಯಾಯಾಲಯ ಸೂಚಿಸಿತು. ಈ ಸೂಚನೆಯು ಬಿಸಿಸಿಐ ಸೂಪರ್ ಸೀಡ್ ಆಗುವ ಸುಳಿವನ್ನು ನೀಡಿದಂತಾಗಿದೆ.

ನಿವೃತ್ತಿ ಮುನ್ನ ಮಹಾ ತೀರ್ಪು?

ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಯ ಪ್ರತಿಯೊಂದು ಹಂತದಲ್ಲಿಯೂ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ತಾವು ನಿವೃತ್ತಿಯಾಗುವ ಮುನ್ನ  ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸುವ ತೀರ್ಪು ನೀಡುವ ಸಾಧ್ಯತೆ ಇದೆ. ಜನವರಿ 4 ರಂದು ನಿವೃತ್ತಿಯಾಗುತ್ತಿರುವ ಠಾಕೂರ್, ಅದರ ಹಿಂದಿನ ದಿನ ತೀರ್ಪು ನೀಡುವ ಸಂಭವವಿದೆ. ಅಂದಹಾಗೆ ಅವರ ನಂತರ ಸರ್ವೋಚ್ಚ ನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜೆ.ಎಸ್. ಖೇಹರ್ ಆಯ್ಕೆಯಾಗಲಿದ್ದಾರೆ.

Latest Videos
Follow Us:
Download App:
  • android
  • ios