ನವದೆಹಲಿ[ಸೆ.19]: ಪರಿಶಿಷ್ಟಜಾತಿ ಮತ್ತು ಪಂಗಡದ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿ ಕಳೆದ ವರ್ಷ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ವಿರುದ್ಧ ಸುಪ್ರೀಂಕೋರ್ಟ್‌ ತ್ರಿಸದಸ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸಂವಿಧಾನದ ಸ್ಪೂರ್ತಿಗೆ ವಿರುದ್ಧವಾಗಿ ಈ ತೀರ್ಪು ಪ್ರಕಟಿಸಲಾಗಿದೆಯೇ ಎಂದು ದ್ವಿಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್‌ ಖಾರವಾಗಿ ಪ್ರಶ್ನಿಸಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿದ ತನ್ನ ತೀರ್ಪನ್ನು ಮರುಪರಿಶೀಲನೆಗೊಳಪಡಿಸಬೇಕು ಎಂದು ಕೋರಿದ ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಂ.ಆರ್‌ ಶಾ ಹಾಗೂ ಬಿ.ಆರ್‌ ಗವಾಯಿ ಅವರು ಬುಧವಾರ ವಿಚಾರಣೆ ನಡೆಸಿದರು. ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗಿ 70 ವರ್ಷಗಳೇ ಸಂದಿದ್ದರೂ, ಪರಿಶಿಷ್ಟಜಾತಿ ಮತ್ತು ಪಂಗಡದ ಜನತೆ ಇನ್ನೂ ಅಸ್ಪೃಶ್ಯತೆ ಮತ್ತು ಅಸಮಾನತೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಕಾನೂನಿನ ನಿಯಮಾವಳಿ ಪ್ರಕಾರ ಕೆಲವೊಂದು ನಿರ್ದೇಶನಗಳನ್ನು ನೀಡುವ ಸುಳಿವನ್ನು ನೀಡಿತು.

ಅಲ್ಲದೆ, 2018ರ ಮಾ.20ರಂದು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಿದ ಸುಪ್ರೀಂ ತೀರ್ಪು ಸಂವಿಧಾನದ ಆಶಯಕ್ಕೆ ವಿರುದ್ಧವಾದದಾಗಿದೆ. ಕಾನೂನಿನ ದುರುಪಯೋಗವಾಗುತ್ತಿದೆ ಎಂಬ ಕಾರಣಕ್ಕೆ ಸಂವಿಧಾನ ಮತ್ತು ನಿಯಮಗಳ ವಿರುದ್ಧವಾಗಿಯೇ ತೀರ್ಪು ನೀಡುತ್ತೀರಾ? ಜಾತಿ ಆಧಾರದ ಮೇಲೆ ನೀವು ವ್ಯಕ್ತಿಗಳನ್ನು ಅನುಮಾನಿಸುವಿರಾ? ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿಯೂ ಸುಳ್ಳು ದೂರುಗಳನ್ನು ದಾಖಲಿಸುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೇಳಿತು.

ಬಳಿಕ ಈ ಕುರಿತಾದ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ, ಈ ವ್ಯಾಜ್ಯಕ್ಕೆ ಸಂಬಂಧಿಸಿದ ಅರ್ಜಿದಾರರು ಮುಂದಿನ ಒಂದು ವಾರದೊಳಗೆ ಲಿಖಿತ ರೂಪದ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿತು.