ಮಂಡ್ಯ :  ನಟ, ರಾಜಕಾರಣಿ ದಿ.ಅಂಬರೀಶ್   ಪತ್ನಿ ಸುಮಲತಾ ಅವರ 26ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಪುತ್ರ ಅಭಿಷೇ ಕ್ ತಾಯಿಯೊಂದಿಗೆ ಮಂಡ್ಯ ಜಿಲ್ಲೆ ಭಾರತೀನಗರ ಸಮೀಪದ ಚಿಕ್ಕರಸಿನಕೆರೆಯಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಸವಪ್ಪನ ಆಶೀರ್ವಾದ ಪಡೆದರು.

ಇದೇ ಪ್ರಥಮ ಬಾರಿಗೆ ಸುಮಲತಾ ಮತ್ತು ಅಭಿಷೇಕ್ ಇಲ್ಲಿಗೆ ಆಗಮಿಸಿದ್ದರು. ಬಳಿಕ ಸ್ಥಳದಲ್ಲಿ ನೆರೆದಿದ್ದ ಅಂಬರೀಶ್ ಅಭಿಮಾನಿಗಳು ಮಾತನಾಡಿ, ಶ್ರೀ ಕ್ಷೇತ್ರ  ಅಭಿವೃದ್ಧಿ ಹೊಂದಲು ಅಂಬರೀಶ್ ಕೊಡುಗೆ ಅಪಾರವಾಗಿದೆ ಎಂದು ಭಾವುಕರಾಗಿ ಹೇಳಿಕೊಂಡರು. ಸುಮಲತಾ ಮತ್ತು ಅಭಿಷೇಕ್ ಗೌಡ ಪ್ರತಿಕ್ರಿಯಿಸಿ, ಅಂಬಿಯ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಾವು ಬೆಲೆ ಕಟ್ಟಲಾಗುವುದಿಲ್ಲ. ಅವರಿಲ್ಲದ ಈ ದಿನ ನಮಗೂ ಶೂನ್ಯವಾಗಿದೆ ಎಂದು ಕಣ್ಣೀರು ಹಾಕಿದರು.

ಜೆಡಿಎಸ್ ಯುವ ಮುಖಂಡರಾದ ಸಂತೋಷ್ ತಮ್ಮಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶ್ರೀ ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಗೀಗೌಡ, ಅಂಬಿ ಆಪ್ತ ಸೀನಪ್ಪ ಇತರರಿದ್ದರು. ಚಿಕ್ಕರಸಿನಕೆರೆ ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆ ಪಕ್ಕದಲ್ಲಿದೆ.

ಅಂಬಿ ಸಮಾಗೆ ಪೂಜೆ: ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಭಿಮಾನಿಗಳು ನಿರ್ಮಿಸಿರುವ ಸಮಾಧಿಗೆ ಸುಮಲತಾ ಹಾಗೂ ಅಭಿಷೇಕ್ ಪೂಜೆ ಸಲ್ಲಿಸಿದರು. ಸುಮಲತಾ ಅಭಿಷೇಕ್ ಆಗಮಿಸುತಿದ್ದಂತೆ ಜೈಕಾರ ಹಾಕಿ ಜೂನಿಯರ್ ರೆಬೆಲ್ ಎಂದು ಅಭಿಷೇಕ್ ಅವರನ್ನು ಕೂಗಿದರು.